ಸಿದ್ದಾಪುರ: ತಾಲೂಕಿನಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ 95.56ರಷ್ಟಾಗಿದ್ದು, 8 ಸರಕಾರಿ, 2 ಅನುದಾನಿತ, 3 ಅನುದಾನರಹಿತ ಸೇರಿದಂತೆ 13 ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ಪರೀಕ್ಷೆಗೆ ಕುಳಿತ 1263 ವಿದ್ಯಾರ್ಥಿಗಳಲ್ಲಿ 1207 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಪಟ್ಟಣದ ಪ್ರಶಾಂತಿ ಪ್ರೌಢಶಾಲೆಯ ತುಷಾರ ಶಾನಭಾಗ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ನಾಣಿಕಟ್ಟಾ ಸರ್ಕಾರಿ ಪ್ರೌಢಶಾಲೆಯ ಮೀನಾಕ್ಷಿ ಎಂ.ಗೌಡ ಹಾಗೂ ಕಾನಸೂರಿನ ಕಾಳಿಕಾಭವಾನಿ ಪ್ರೌಢಶಾಲೆಯ ಕುಮಾರ ಭಟ್ಟ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ತಾಲೂಕಿನ 33 ಪ್ರೌಢಶಾಲೆಗಳಲ್ಲಿ ಸರಕಾರಿ ಪ್ರೌಢಶಾಲೆಗಳು ಶೇ 96.6, ಅನುದಾನಿತ ಶೇ 93, ಅನುದಾನರಹಿತ ಪ್ರೌಢಶಾಲೆಗಳು ಶೇ 99.4 ಫಲಿತಾಂಶ ಸಾಧಿಸಿವೆ.
ಸರಕಾರಿ ಪ್ರೌಢಶಾಲೆಗಳಾದ ಕೋಲಸಿರ್ಸಿ, ಮನಮನೆ, ಜಿಡ್ಡಿ, ಶಿರಗುಣಿ, ನಾಣಿಕಟ್ಟಾ, ವಂದಾನೆ, ಹಳ್ಳಿಬೈಲ, ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಗಳು, ಪ್ರಶಾಂತಿ ಪ್ರೌಢಶಾಲೆ, ಕಾನಸೂರಿನ ಕಾಳಿಕಾ ಭವಾನಿ ಆಂಗ್ಲಮಾಧ್ಯಮ, ಲಿಟ್ಟಪ್ಲವರ್ ಆಂಗ್ಲಮಾಧ್ಯಮ, ಇಟಗಿಯ ಆರ್.ವಿ.ಪ್ರೌಢಶಾಲೆ, ಕಾನಸೂರಿನ ಕಾಳಿಕಾಭವಾನಿ ಪ್ರೌಢಶಾಲೆಗಳು ಶೇ 100 ಫಲಿತಾಂಶ ಸಾಧಿಸಿವೆ. ಲಂಬಾಪುರ ಶೇ 88.80, ಕಾನಗೋಡ ಶೇ 96.49, ಶಿರಳಗಿ ಶೇ 96, ಹಾಳದಕಟ್ಟಾ ಶೇ 96.84, ಹಲಗೇರಿ ಪಬ್ಲಿಕ್ ಶಾಲೆ ಶೇ 98.14, ಪಟ್ಟಣದ ಉರ್ದು ಪ್ರೌಢಶಾಲೆ ಶೇ 61.10, ಉಂಬಳಮನೆ ಇಂದಿರಾ ವಸತಿಶಾಲೆ ಶೇ 94.59, ಸರಕುಳಿ ಶೇ 96.87, ಹೆಗ್ಗರಣಿ ಶೇ 92.30, ಹಾರ್ಸಿಕಟ್ಟಾ ಶೇ 95.65, ಬಿಳಗಿ ಶೇ 96.77, ದೊಡ್ಮನೆ ಶೇ 97.91, ಬಿದ್ರಕಾನ ಶೇ 94.87, ಕವಂಚೂರು ಶೇ 47.05, ಬೇಡ್ಕಣಿ ಶೇ 96.87, ಕಿಬ್ಬಳ್ಳಿ ಶೇ 95, ಪಟ್ಟಣದ ಎಸ್.ಆರ್.ಜಿ.ಎಚ್.ಎಂ ಶೇ 94.73, ಎಸ್.ವಿ.ಪ್ರೌಢಶಾಲೆ ಶೇ 81.25, ಎಸ್.ವಿ. ಆಂಗ್ಲಮಾಧ್ಯಮ ಶೇ 98, ಹೊಸೂರಿನ ಬಂಕೇಶ್ವರ ಶೇ 86.48ರಷ್ಟು ಫಲಿತಾಂಶ ಸಾಧಿಸಿವೆ.
ಉತ್ತಮ ಫಲಿತಾಂಶ ತಂದಿರುವುದಕ್ಕಾಗಿ ವಿದ್ಯಾರ್ಥಿ ಸಮೂಹವನ್ನು, ಪಾಲಕ- ಪೋಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಅಭಿನಂದಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ವಿಧಾನಸಭಾಧ್ಯಕ್ಷರ ಅಭಿನಂದನೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಿದ್ದಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.
625ಕ್ಕೆ 625 (100%) ಅಂಕ ಗಳಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡ ಪಟ್ಟಣದ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ತುಷಾರ್ ಶಾನಭಾಗ, 625ಕ್ಕೆ 624 (99.84%) ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡ ನಾಣಿಕಟ್ಟಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೀನಾಕ್ಷಿ ಗೌಡ ಹಾಗೂ ಕಾನಸೂರಿನ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ್ ಭಟ್ಟ ಇವರಿಗೆ ಉತ್ತಮ ಸಾಧನೆ ಮಾಡಿ, ತಾಲೂಕಿಗೆ ಕೀರ್ತಿ ತಂದಿದ್ದಕ್ಕಾಗಿ ಕಾಗೇರಿಯವರು ಹರ್ಷ ವ್ಯಕ್ತಪಡಿಸಿ, ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೇ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಶ್ರಮಿಸಿದ ಎಲ್ಲ ಶಾಲಾ ಶಿಕ್ಷಕ ವೃಂದಕ್ಕೆ, ಶಿಕ್ಷಣಾಧಿಕಾರಿಗಳಿಗೆ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.