ಶಿರಸಿ: ತಾಲೂಕಿನ ಗೌಡಳ್ಳಿಯಲ್ಲಿ ನೂತನವಾಗಿ ಆರಂಭಿಸಿರುವ ಕಾಂಚನಾ ಹ್ಯೂಂಡೈ ಶೋರೊಂ ಉದ್ಘಾಟನೆಯನ್ನು ಬುಧವಾರದಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಚನ ಹ್ಯೂಂಡೈ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಯಶಸ್ವಿಯಾಗಿ ನಡೆಯುತ್ತಿದೆ ಎನ್ನುವದಕ್ಕೆ ಶಿರಸಿ ಗೌಡಳ್ಳಿಯಲ್ಲಿ ಅವರ 9ನೇ ಶೋರೂಂ ಪ್ರಾರಂಭಗೊಂಡಿದ್ದೆ ಸಾಕ್ಷಿಯಾಗಿದೆ. ಶಿರಸಿ ಅಬಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿರುವುದರಿಂದ ಇಲ್ಲಿ ಬಂಡವಾಳಶಾಹಿಗಳು ಮುಂದೆ ಬರುವಂತಹ ಸಾಕಷ್ಟು ಅವಕಾಶಗಳಿವೆ. ಬಂಡವಾಳಶಾಹಿಗಳು ಮುಂದೆ ಬಂದರೆ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದೆ ಎಂದರು.
ಶಿರಸಿಯಲ್ಲಿ ವಾಹನ ಖರಿದೀಸುವವರ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ತಕ್ಕಂತೆ ಸಾಲ ಕೊಡುವ ಬ್ಯಾಂಕುಗಳು ಹೆಚ್ಚಾಗಿವೆ ಎಂದರೆ ಇಲ್ಲಿನ ಜನರು ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾಗಿದ್ದಾರೆಂದೇ ಅರ್ಥ. ಆದ್ದರಿಂದ ಬಂಡವಾಳಶಾಹಿಗಳು ಶಿರಸಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಅವಧಿ ಮೀರಿದ ವಾಹನಗಳನ್ನು ಪೆÇೀಲಿಸರು ಹಿಡಿಯುವ ಮುನ್ನವೇ ಬದಲಿಸಬೇಕು. ಸರಕಾರ ಕೂಡಾ ಇದಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಪರಿಸರಸ್ನೇಹಿ ವಾಹನಗಳ ಕಂಪನಿಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದರು. ನಮ್ಮ ದೇಶ ಎಷ್ಟು ಮುಂದುವರೆದಿದೆ ಎಂದರೆ, ನಮ್ಮಲ್ಲಿ ಎಷ್ಟು ಹಣವಿದೆಯೋ ಅದಕ್ಕೆ ತಕ್ಕಂತೆ ವಾಹನ ತಯಾರಿಸುವ ತಂತ್ರಜ್ಞಾನ ನಮ್ಮಲಿದೆ ಎಂದರು.
ಕಾಂಚನ ಹ್ಯೂಂಡೈ ವ್ಯವಸ್ಥಾಪಕ ನಿರ್ದೇಶಕ ಪ್ರಸಾದರಾಜ್ ಕಾಂಚನ ಮಾತನಾಡಿ, ಕಾಂಚನ ಹ್ಯೂಂಡೈ ದೇಶದ ಅತ್ಯುತ್ತಮ ಕಂಪನಿಗಳಲ್ಲೊಂದಾಗಿ ಗ್ರಾಹಕರಿಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ಈ ಕಂಪನಿಯಿಂದ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗಿದೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಿಂಗಳಿಗೆ 500 ಕೋಟಿ ರೂ. ವ್ಯವಹಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಂಪನಿಯ ಸೇಲ್ಸ್ ಮ್ಯಾನೇಜರ್ ಹರ್ಷ ಕೆ., ಕಂಪನಿಯ ಇಂದಿನ ಬೆಳವಣಿಗೆ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಭೀಮಣ್ಣ ಟಿ.ನಾಯ್ಕ, ಇಸಳೂರು ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ ಭಟ್, ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ, ಡಾ.ರಾಘವೇಂದ್ರ ಕಾಮತ್ ಮುಂತಾದವರು ಇದ್ದರು.