ಭಟ್ಕಳ: ತಾಲೂಕಿನ ಮಾವಿನಕುರ್ವೆ ಬಂದರು ಧಕ್ಕೆ ಸ್ಥಳದಲ್ಲಿ ಲಂಗರು ಹಾಕಿದ ೩ ಬೋಟ್‌ಗಳಿಗೆ ನೀರು ತುಂಬಿ ಮುಳುಗಡೆಯಾಗಿರುವ ಘಟನೆ ವರದಿಯಾಗಿದೆ.
ಮಂಗಳವಾರದಂದು ಮುಂಜಾನೆಯ ವೇಳೆ ಸಮುದ್ರದ ಧಕ್ಕೆಯಲ್ಲಿ ನೀರಿನ ಇಳಿತದ ಸಂದರ್ಭದಲ್ಲಿ ಬೋಟ್ ಕೆಳಭಾಗಕ್ಕಿಳಿದು ಹೂಳಿನಲ್ಲಿ ಹೂತು ಹೋದ ಕಾರಣ ಉಬ್ಬರದ ಸಮಯದಲ್ಲಿ ನೀರು ತುಂಬುತ್ತಿದ್ದರು ಬೋಟ್ ಮೇಲೆ ಬಾರದೇ ಮೂರು ಬೋಟ್‌ನಲ್ಲಿ ನೀರು ನುಗ್ಗಿ ಮುಳುಗಡೆಯಾಗಿದೆ. ನಾಗಪ್ಪ ಖಾರ್ವಿ ಮಾಲೀಕತ್ವದ ದುರ್ಗಾಂಬಿಕಾ ದೇವಿ, ಪ್ರೇಮಾ ಖಾರ್ವಿ ಮಾಲೀಕತ್ವದ ಶ್ರೀನಿತ್ಯಾನಂದ, ರಾಮಚಂದ್ರ ಖಾರ್ವಿ ಮಾಲೀಕತ್ವದ ಗಗನ ಎಂಬ ಮೂರು ಬೋಟ್‌ಗಳು ಮುಳುಗಿದ್ದು, ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮೀನುಗಾರರು ಹಾಗೂ ಸ್ಥಳೀಯರು ಸೇರಿ ಬೋಟ್ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟು ಅನಾಹುತ ಸಂಭವಿಸಿದ್ದರೂ ಬಂದರಿನತ್ತ ಯಾವುದೇ ಅಧಿಕಾರಿಗಳು ಬಾರದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೂಳು ತೆಗೆಯದೇ 20 ವರ್ಷ: ಈ ಹಿಂದೆ ಮಾಜಿ ಶಾಸಕ ಡಾ.ಚಿತ್ತರಂಜನ್ ಅವರ ಅವಧಿಯಲ್ಲಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದ ಅವರ ಮರಣದ ನಂತರ ಒಂದು ಬಾರಿ ಹಾಗೂ ಅದಾದ ಕೆಲ ವರ್ಷದ ಬಳಿಕ ಅಲ್ಪ ಪ್ರಮಾಣದಲ್ಲಿ ಹೂಳೆತ್ತುವ ಕಾರ್ಯವಾಗಿದ್ದು ಬಿಟ್ಟರೆ, ಅಂದಾಜು 20 ವರ್ಷಗಳಿಂದ ಇಲ್ಲಿ ಹೂಳು ಸಂಗ್ರಹವಾಗಿದೆ ಎನ್ನುತ್ತಾರೆ ಮೀನುಗಾರರು.
ಈ ಬಗ್ಗೆ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಹಾಗೂ ಇಲಾಖೆಯ ಬಾಗಿಲು ತಟ್ಟಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ 2009ನೇ ಸಾಲಿನಲ್ಲಿ ಇಲ್ಲಿನ ಬೋಟ್ ಯೂನಿಯನ್‌ಗಳ ಪ್ರಮುಖರು ವೈಯಕ್ತಿಯ ಖರ್ಚಿನಲ್ಲಿ ಸುಮಾರು 4 ಲಕ್ಷ ವ್ಯಯಿಸಿ ಕೇವಲ ಬೋಟ್ ನಿಲ್ಲುವ ಪ್ರದೇಶದಲ್ಲಿ ಹೂಳು ಎತ್ತಿಸಿದ್ದರು.
ಕೋಟ್…
ಮಾವಿನಕುರ್ವೆ ಬಂದರಿನಲ್ಲಿ ನೂರಾರು ಬೋಟುಗಳು ಆಶ್ರಯ ಪಡೆಯುತ್ತವೆ. ನೀರಿನ ಇಳಿತದ ಸಮಯದಲ್ಲಿ ಬೋಟುಗಳು ಅತಂತ್ರವಾಗುತ್ತಿದ್ದು, ಒಂದಕ್ಕೊದು ಡಿಕ್ಕಿಯಾಗಿ ಹಾನಿಯಾಗುತ್ತಿದೆ. ಹೂಳೆತ್ತದಿದ್ದರೆ ಮೀನುಗಾರರು ತೀವ್ರ ಸಂಕಷ್ಟಕ್ಕೊಳಗಾಗಲಿದ್ದಾರೆ. ಮೀನುಗಾರಿಕಾ ಮಂತ್ರಿಗಳು ಹಾಗೂ ಶಾಸಕರು ಕಳೆದ ಒಂದು ತಿಂಗಳ ಹಿಂದೆ ನೀಡಿದ ಭರವಸೆ ಹಾಗೆಯೇ ಉಳಿದಿದ್ದು, ತಕ್ಷಣ ಕಾಮಗಾರಿಯನ್ನು ಮಾಡಿಕೊಡಬೇಕಾಗಿದೆ. ಸ್ಪಂದಿಸದಿದ್ದರೆ ನಮ್ಮ ಉತ್ತರ ಬೇರೆಯದ್ದೇ ಆಗಲಿದೆ.– ಮಂಜುನಾಥ ಖಾರ್ವಿ, ಮೀನುಗಾರರ ಹಿರಿಯ ಮುಖಂಡ
ಒಂದು ಬಾರಿ ದೊಡ್ಡ ಪ್ರಮಾಣದಲ್ಲಿ ಹೂಳು ತೆಗೆಸಿದ್ದಲ್ಲಿ ಸುಮಾರು 8-10 ವರ್ಷಗಳ ಕಾಲ ಮತ್ತೆ ಹೂಳು ತುಂಬುವುದಿಲ್ಲ. ಆದರೆ ಸರಕಾರಕ್ಕೆ, ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ನಮ್ಮ ಕಷ್ಟ ಯಾಕೆ ಅರ್ಥವಾಗುತ್ತಿಲ್ಲ? ಸರಕಾರ ತಕ್ಷಣ 2 ಕೋಟಿ ಬಿಡುಗಡೆ ಮಾಡಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಬೇಕು. ಬ್ರೇಕ್ ವಾಟರ್ ಕಾರ್ಯವನ್ನೂ ಮಾಡಬೇಕು.– ಪುರಂದರ ಖಾರ್ವಿ, ಬೋಟ್ ಮಾಲೀಕ