ಕಾರವಾರ: ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಮೇ 21 ಮತ್ತು 22ರಂದು ಶೈಕ್ಷಣಿಕ ಜಿಲ್ಲೆ ಶಿರಸಿಯ 19 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಪರೀಕ್ಷೆಗೆ 4200 ಅಭ್ಯರ್ಥಿಗಳು ಹಾಜರಾಗಲಿದ್ದು, ಮೇ 21ರಂದು ಬೆಳಿಗ್ಗೆ 10 ಗಂಟೆಯಿAದ 12.30ರವರೆಗೆ ಹಾಗೂ ಮಧ್ಯಾಹ್ನ 2.30 ಗಂಟೆಯಿಂದ 5.30ರವರೆಗೆ, 22ರಂದು ಬೆಳಿಗ್ಗೆ 10ರಿಂದ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ 5ರವರೆಗೆ ನಡೆಯಲಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಕೊಠಡಿ ಮೇಲ್ವಿಚಾರಕರು, ಸಿಟ್ಟಿಂಗ್ ಸ್ಕ್ವಾಡ್ ಹಾಗೂ ಕೇಂದ್ರ ವೀಕ್ಷಕರನ್ನು ನೇಮಿಸಲಾಗಿದೆ. ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲು ಕ್ರಮ ಜರುಗಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಭದ್ರತೆಗೆ ಕ್ರಮ ಜರುಗಿಸಿದೆ. ಕೇಂದ್ರಕ್ಕೆ ಆರೋಗ್ಯ ಸಹಾಯಕಿಯನ್ನು ನೇಮಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಪರೀಕ್ಷಾ ದಿನದಂದು ವಿದ್ಯುತ್ ಕಡಿತ ಮಾಡದಂತೆ ಹೆಸ್ಕಾಂಗೆ ಸೂಚಿಸಿದೆ.
ಪರೀಕ್ಷಾರ್ಥಿಗಳು ಪರಿಕ್ಷಾ ಆರಂಭದ 2 ಗಂಟೆ ಮುಂಚಿತವಾಗಿ ಹಾಜರಿರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪರೀಕ್ಷೆಗೆ ಹಾಜಾರಾಗುವ ಅಭ್ಯರ್ಥಿಗಳಿಗೆ ವಾಚ್, ಮೊಬೈಲ್, ಬ್ಲೂಟೂತ್ ಡಿವೈಸ್, ಎಲೆಕ್ಟ್ರಾನಿಕ್ ವಸ್ತುಗಳು, ಕ್ಯಾಲ್ಕ್ಯುಲೇಟರ್ ಇತ್ಯಾದಿ ಪರೀಕ್ಷಾ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿಷೇಧಿಸಿದೆ ಹಾಗೂ 19 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ ಎಂದು ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.