ಸಿದ್ದಾಪುರ: ತಾಲೂಕಿನ ಗೋಳಿಮಕ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಈ ವೇಳೆ ಶಾಲೆ ದತ್ತು ಪಡೆದ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಶಿಕ್ಷಕರ ಉಪಸ್ಥಿಯಲ್ಲಿ ತಮ್ಮ ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ನೋಟ್ ಬುಕ್, ಕ್ಯಾಪ್ ಹಾಗೂ ಸಿಹಿ ನೀಡುವುದರ ಮೂಲಕ ಶಾಲೆಯ ಮಕ್ಕಳನ್ನು ಸ್ವಾಗತಿಸಿದರು.
ನಂತರ ಮಾತನಾಡಿ ವಿದ್ಯಾರ್ಥಿ ಜೀವನ ಮಾನವನ ಬದುಕಿನಲ್ಲೇ ಶ್ರೇಷ್ಠವಾದದ್ದು.ಈ ಅವಕಾಶವನ್ನು ವಿದ್ಯಾರ್ಥಿಗಳು ಗಮನದಲ್ಲಿರಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಶಿಕ್ಷಕರು ಸರ್ವೋತೋಮುಖ ಅಭಿವೃದ್ಧಿಗೆ ಪೂರಕವಾಗಿ ತಮ್ಮ ಪಾಲಿನ ಪಾಠ ಕಲಿಸುವ ಜತೆ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಮಹತ್ವದ ಜವಾಬ್ದಾರಿ ಶಿಕ್ಷರ ಮೇಲಿದೆ ಎಂದರು. ಶಿಕ್ಷಕರ ಜತೆಗೆ ವಿದ್ಯಾರ್ಥಿಗಳ ಪೋಷಕರು ಸಹ ಮಕ್ಕಳ ಕಲಿಕೆಗೆ ಆಸಕ್ತಿ ತೋರಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಿ. ವಿದ್ಯೆ ಯಾರೂ ಕಸಿದುಕೊಳ್ಳಲಾರದ ಸಂಪತ್ತು. ಅಕ್ಷರ ಜ್ಞಾನ ಎಲ್ಲ ಕಾಲಕ್ಕೂ ಕೈ ಹಿಡಿಯುತ್ತದೆ. ಮಕ್ಕಳು ಕಷ್ಟಪಟ್ಟು ಓದಿ ಮುಂದೆ ಬರುವ ಮೂಲಕ ಹೆತ್ತವರಿಗೆ, ಗುರು- ಹಿರಿಯರಿಗೆ, ನಮ್ಮ ತಾಲೂಕಿಗೆ ಹಾಗೂ ಜಿಲ್ಲೆ, ರಾಜ್ಯ, ದೇಶಕ್ಕೆ ಉತ್ತಮ ಹೆಸರು ತಂದುಕೊಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸುಭಾಷ ನಾಯ್ಕ ಕಾನಸೂರ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಹಾಗೂ ಪಾಲಕರು ಉಪಸ್ಥಿತರಿದ್ದರು.