ಹೊನ್ನಾವರ: ತಾಲೂಕಿನ ಎಸ್.ಡಿ.ಎಂ.ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎಸ್.ಹೆಗಡೆ ಇತ್ತೀಚಿಗೆ ನಿಧನರಾಗಿದ್ದು ಕಾಲೇಜಿನ ಶಿಕ್ಷಕರ ಸಂಘದ ವತಿಯಿಂದ ಸೋಮವಾರ ನುಡಿ ನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ವಿ.ಹೆಗಡೆ ಮಾತನಾಡಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂಥ ಪಠ್ಯ ಪುಸ್ತಕವನ್ನು ಬರೆದಿದ್ದ ಪ್ರೊ.ಜಿ.ಎಸ್.ಹೆಗಡೆ ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಯಾಗಿಯೂ ಹಲವು ವೇದಿಕೆಗಳಲ್ಲಿ ಗಮನ ಸೆಳೆದಿದ್ದರು ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರೀತಿಪಾತ್ರ ಶಿಕ್ಷಕರಾಗಿದ್ದ ಜಿ.ಎಸ್.ಹೆಗಡೆ ತಮ್ಮ ಸಹೋದ್ಯೋಗಿಗಳೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಮಾತನಾಡಿ,ಪರಿಸರ ರಕ್ಷಣೆಯ ಕುರಿತಂತೆ ಹೆಚ್ಚಿನ ಕಾಳಜಿ ಹೊಂದಿದ್ದ ಪ್ರೊ.ಜಿ.ಎಸ್.ಹೆಗಡೆ, ಎನ್.ಎಸ್.ಎಸ್.ಅಧಿಕಾರಿಯಾಗಿದ್ದಾಗ ಕಾಲೇಜಿನ ಆವರಣದಲ್ಲಿ ನಾಟಿ ಮಾಡಿಸಿದ್ದ ಗಿಡಗಳು ಅವರನ್ನು ಶಾಶ್ವತವಾಗಿ ಸ್ಮರಿಸುವಂತಿವೆ ಎಂದು ಹೇಳಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಹೆಗಡೆ,ಖಜಾಂಚಿ ಡಾ.ಮಂಜುನಾಥ ಹೆಗಡೆ, ಡಾ.ಪಿ.ಎಂ.ಹೊನ್ನಾವರ, ಡಾ.ವಿ.ಎಂ.ಭಂಡಾರಿ , ಡಾ.ರೇಣುಕಾದೇವಿ ಗೋಳಿಕಟ್ಟೆ, ಡಾ.ಡಿ.ಎಲ್.ಹೆಬ್ಬಾರ, ಪ್ರೊ.ಗೋಪಾಲಕೃಷ್ಣ ಹೆಗಡೆ, ಡಾ.ಸುರೇಶ ಎಸ್., ಪ್ರೊ.ನಾಗರಾಜ ಹೆಗಡೆ ಅಪಗಾಲ, ಪ್ರೊ.ಪ್ರಶಾಂತ ಹೆಗಡೆ ಮೂಡಲಮನೆ ಅಗಲಿದ ಚೇತನಕ್ಕೆ ನುಡಿನಮನ ಸಲ್ಲಿಸಿದರು.
ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಕಳಿಸಿದ ಸಂದೇಶವನ್ನು ಸಭೆಯಲ್ಲಿ ವಾಚಿಸಲಾಯಿತು. ಪ್ರೊ.ಜಿ.ಎಸ್.ಹೆಗಡೆ ಅವರ ಭಾವಚಿತ್ರಕ್ಕೆ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು.