ಶಿರಸಿ: ಇಲ್ಲಿಯ ಎಪಿಎಂಸಿ ಅಧ್ಯಕ್ಷ ಶಿವಕುಮಾರ ಗೌಡ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಮುಂದಿನ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಈಗ ಗರಿಗೆದರಿದೆ.
ಎಪಿಎಂಸಿ ಅವಧಿಯ ಕೊನೆಯ ೧೮ ತಿಂಗಳ ಅವಧಿಗೆ ಶಿವಕುಮಾರ ಆಯ್ಕೆಯಾಗಿದ್ದರು. ಈಗಾಗಲೇ ೯ ತಿಂಗಳ ಅವಧಿಯನ್ನು ಪೂರ್ಣಗೊಳಿಸಿದ್ದ ಅವರು ತಮ್ಮ ರಾಜೀನಾಮೆ ಪತ್ರವನ್ನು ಎಪಿಎಂಸಿ ನಿರ್ದೇಶಕರಿಗೆ ರವಾನಿಸಿದ್ದಾರೆ.
ಎಪಿಎಂಸಿ ಅಧ್ಯಕ್ಷ ಸ್ಥಾನದ ಗಾದಿಯ ಕುರಿತಂತೆ ಕಳೆದ ೯ ತಿಂಗಳ ಹಿಂದೆ ಸಚಿವ ಶಿವರಾಮ ಹೆಬ್ಬಾರ್ ಮತ್ತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಡುವೆ ತೀವ್ರ ಸ್ಪರ್ಧೆ ನಡೆದಿತ್ತು ಎನ್ನಲಾಗಿದೆ. ಅಂತಿಮವಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಪ್ತ, ಮೂಲ ಬಿಜೆಪಿಗ ಶಿವಕುಮಾರ ಗೌಡ ಅವರಿಗೆ ಅಧ್ಯಕ್ಷ ಸ್ಥಾನ ಒದಗಿಸಿದ್ದರು.
ಒಂದು ಮೂಲದ ಪ್ರಕಾರ ಶಿವಕುಮಾರ ಗೌಡ ಅವರಿಗೆ ೯ ತಿಂಗಳ ಅವಧಿ, ಹೆಬ್ಬಾರ್ ಬೆಂಬಲಿಗರಿಗೆ ಇನ್ನುಳಿದ ೯ ತಿಂಗಳ ಅವಧಿ ಎಂಬ ಒಪ್ಪಂದದ ಮೇಲೆ ಶಿವಕುಮಾರ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಎನ್ನಲಾಗಿದೆ. ಈಗ ಶಿವಕುಮಾರ ಗೌಡ ಯಾವುದೇ ಕಾರಣವಿಲ್ಲದೇ ರಾಜೀನಾಮೆ ನೀಡಿರುವುದು ಈ ವಾದಕ್ಕೆ ಬಲ ಬಂದAತಾಗಿದೆ. ಶಿವರಾಮ ಹೆಬ್ಬಾರ್ ಬೆಂಬಲಿಗರಾದ ಪ್ರಶಾಂತ ಗೌಡ ಸಂತೊಳ್ಳಿ ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆಗಳು ದಟ್ಟವಾಗಿದೆ.