ಯಲ್ಲಾಪುರ: ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ಗಾಳಿ ಬೀಸಿ ಸುರಿದ ಮಳೆಯ ರಭಸಕ್ಕೆ ಐದಾರು ಮನೆಗಳಿಗೆ ಹಾನಿಯಾಗಿರುವ ಘಟನೆ ಸಂಭವಿಸಿರುತ್ತದೆ.
ರಾತ್ರಿ ಸುಮಾರು 8.30ರ ಹೊತ್ತಿಗೆ ಶುರುವಾದ ಗಾಳಿ ಶ್ರೀಧರ ತಿಪ್ಪಯ್ಯ ಪಟಗಾರ,ಸಹದೇವ ಮಾಬ್ಲೇಶ್ವರ ಪಟಗಾರ, ಯಶೋಧಾ ರವಿ ಮೊಗೇರ,ಶಾರದಾ ಶ್ರೀಧರ ಮೊಗೇರ ಇವರ ಮನೆಗಳಿಗೆ ಹಾಕಿದ ತಗಡಿನ ಸೀಟುಗಳನ್ನು ನೂರಾರು ಮಾರು ದೂರದವರೆಗೆ ಎತ್ತೊಯ್ದು ಎಸೆದಿದೆ . ಚಿದಂಬರ ನಾಯ್ಕ ಎನ್ನುವವರ ದನದ ಕೊಟ್ಟಿಗೆಗೂ ಹಾನಿಯಾಗಿರುತ್ತದೆ.
ಭಾರತಿ ನಾರಾಯಣ ಪಟಗಾರ ಅವರ ಮನೆಯ ಮೇಲೆ ಟೊಂಗೆ ಬಿದ್ದು ಮನೆ ಜಖಂಗೊಂಡಿದ್ದು, ಲಕ್ಷ್ಮೀ ರುದ್ರಾ ಮೊಗೇರ ಎಂಬುವವರ ಕೊಟ್ಟಿಗೆಯ ಒಂದಿಷ್ಟು ಹೆಂಚುಗಳು ಹಾರಿ ಹೋಗಿದೆ. ಗಾಳಿಗೆ ಸಿಕ್ಕ ದೊಡ್ಡ ದೊಡ್ಡ ಮರದ ಟೊಂಗೆಗಳು ಹತ್ತಾರು ಮಾರು ದೂರ ಹಾರಿ ಬಿದ್ದಿದೆ.
ಪ್ರತ್ಯಕ್ಷ ದರ್ಶಿಗಳು ಹೇಳುವ ಪ್ರಕಾರ, ಗಾಳಿಯ ವೇಗ ಬಹಳ ತೀವ್ರವಿತ್ತು. ಒಂದಿಷ್ಟು ಹೊತ್ತು ಮನೆಯಿಂದ ಹೊರಬರಲೂ ಸಾಧ್ಯವಾಗಲಿಲ್ಲ. ಅಲ್ಲದೆ, ಗಾಳಿಯೊಂದಿಗೆ ಮಳೆಯೂ ಜೋರಾಗಿತ್ತು.
ಕೆಲವು ಮನೆಗಳಿಗೆ ಮಾತ್ರ ಸಾಲಾಗಿ ಹಾನಿ ಮಾಡುತ್ತ ಸಾಗಿರುವ ಗಾಳಿ, ಊರಿನ ಉಳಿದ ಮನೆಗಳಿಗೆ ಅಷ್ಟೊಂದು ಹಾನಿಯಾಗಿಲ್ಲ ಗಾಳಿ ಸಾಗಿದ ದಾರಿಯಲ್ಲಿನ ತೆಂಗು ಮತ್ತು ಬಾಳೆಯ ಮರಗಳಿಗೂ ಹಾನಿಯಾಗಿದ್ದು, ರಸ್ತೆಯ ತುಂಬ ಮರದ ಟೊಂಗೆಗಳು ಮುರಿದು ಬಿದ್ದಿದೆ.
ಮಂಗಳವಾರ ಬೆಳ್ಳಂಬೆಳಿಗ್ಗೆಯೇ ಊರಿನ ಕೆಲವು ಯುವಕರು ಒಟ್ಟಾಗಿ ಹಾರಿದ ತಗಡಿನ ಸೀಟುಗಳನ್ನು ಮತ್ತೆ ಹೊಂದಿಕೆ ಮಾಡಿ, ರಸ್ತೆಯಲ್ಲಿ ಬಿದ್ದಿರುವ ಮರದ ಟೊಂಗೆಗಳನ್ನು ತೆಗೆದು ಹಾಕುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.