ಮುಂಡಗೋಡ: ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ತಾಲೂಕಿನದಂತ್ಯ ಸಂಭ್ರಮದಿಂದ ಆಚರಿಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೂವು ಗುಚ್ಛ ನೀಡಿ ಸ್ವಾಗತಿಸಿ ಸಿಹಿ ಹಂಚಿದರು.
ಕೆಲವು ಶಾಲೆಗಳಲ್ಲಿ ಎಸ್.ಡಿ.ಎಮ್.ಸಿ ಜೊತೆ ಸೇರಿ ಪ್ರಾರಂಭೋತ್ಸವದ ಕಾರ್ಯಕ್ರಮ ಆರಂಭಿಸಿದರು. ಶಾಲಾ ಪ್ರಾರಂಭೋತ್ಸದ ಅಂಗವಾಗಿ ಪಟ್ಟಣದ ರೋಟರಿ ಶಾಲೆಯ ಮುಂಭಾಗದಲ್ಲಿ ಶಾಲಾ ಸಿಬ್ಬಂದಿ ತಳಿರು-ತೋರಣ ಮತ್ತು ಬಣ್ಣ-ಬಣ್ಣದ ಕಾಗದಗಳಿಂದ ಸಿಂಗರಿಸಿ ಬರುವವರನ್ನು ಸ್ವಾಗತಿಸಲು ಅಣಿಗೊಳಿಸಿದ್ದರು. ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರು ಶಾಲೆ ಆರಂಭಕ್ಕೂ ಎರಡು ದಿನ ಮೊದಲೇ ಶಾಲಾ ಕೊಠಡಿ ಹಾಗೂ ಆವರಣವನ್ನು ಸ್ವಚ್ಚಗೊಳಿಸಿದ್ದರು.
ವಿದ್ಯಾರ್ಥಿಗಳಿಗೆ ಮೊದಲ ದಿನವೇ ಪಠ್ಯ ಪುಸ್ತಕಗಳನ್ನು ವಿತರಿಸಿದರು. ಕೋವಿಡ ಕಾರಣಕ್ಕಾಗಿ ಕಳೆದೆರಡು ವರ್ಷಗಳಿಂದ ಶಾಲಾ ಪ್ರಾರಂಭೋತ್ಸವವೇ ಸರಿಯಾಗಿ ನಡೆದಿರಲಿಲ್ಲ. ಅಕಾಲದಲ್ಲಿ ಶಾಲೆ ಆರಂಭವಾಗಿ ಮತ್ತೆ ಲಾಕ್‌ಡೌನ್ ಅಗಿ ಶಾಲೆಗಳು ಮುಚ್ಚಿಕೊಳ್ಳುತ್ತಿದ್ದವು. ಶಾಲೆ ನಡೆದರೂ ಸಂಭ್ರಮ ಇರುತ್ತಿರಲಿಲ್ಲ. ಈ ಬಾರಿ ಮತ್ತೆ ಹಿಂದಿನ ಶಾಲಾ ಪ್ರಾರಂಭೋತ್ಸವದ ಕಳೆ ಕಟ್ಟುವಂತಾಗಿದೆ. ಮೊದಲ ದಿನದ ಶಾಲೆಯಲ್ಲಿ ಒಂದಿಷ್ಟು ಮಕ್ಕಳ ಗೈರು ಹಾಜರಿಯಿತ್ತಾದರೂ ಸಾಕಷ್ಟುಮಕ್ಕಳು ಶಾಲೆ ಸೇರಿದ್ದರು. ಗ್ರಾಮೀಣ ಭಾಗದಲ್ಲಿ ಮಕ್ಕಳ ಹಾಜರಾತಿ ಹೆಚ್ಚಿತ್ತು.