ಮುಂಡಗೋಡ: ತಾಲೂಕಿನಲ್ಲಿ ಸೋಮವಾರ ಸುರಿದ ಭಾರಿ ಗಾಳಿ ಮಳೆಗೆ ಮರಗಿಡಗಳು, ಲೈಟ್ ಕಂಬಗಳು ಮನೆ, ರಸ್ತೆಗಳ ಮೇಲೆ ಬಿದ್ದಿವೆ. ರಸ್ತೆ ಸಂಚಾರದಲ್ಲಿ ಅಡೆತಡೆ ಉಂಟಾದರೆ, ಮನೆಗಳ ಹೆಂಚು, ತಗಡು ಹಾರಿಹೋಗಿ ಜನರ ಬದುಕು ಅಸ್ತವ್ಯಸ್ತಗೊಂಡಿತು.
ತಾಲೂಕಿನ ತೆಗ್ಗಿನಕೊಪ್ಪ ಗ್ರಾಮದಲ್ಲಿ ಎರಡು ಮನೆಯ ಚಾವಣಿಗೆ ಹಾನಿಯಾಗಿದೆ. ಚವಡಳ್ಳಿಯಲ್ಲಿ ನಾಲ್ಕು ಮನೆಗಳ ಮೇಲೆ ಮರ ಬಿದ್ದು, ಒಂದು ಮನೆಯ ಚಾವಣಿಗೆ ಹಾನಿಯಾಗಿದೆ. ಕಲಕೊಪ್ಪದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಪಟ್ಟಣದ ಅಂಧಮಕ್ಕಳ ವಸತಿ ನಿಲಯದ ಚಾವಣಿ ಮತ್ತು ಗೋಡೆಗೆ, ಛತ್ರಪತಿ ಶಿವಾಜಿ ಕೋ- ಆಪರೇಟಿವ್ ಬ್ಯಾಂಕ್‌ನ ಗೋಡೆ ಬಿದ್ದು ಹಾನಿಯಾಗಿದೆ. ಲಮಾಣಿ ತಾಂಡೆಯಲ್ಲಿ ಲಾಲವ್ವ ಲಮಾಣಿಯ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಮಾರಿಕಾಂಬ ನಗರದ ಮಾಲತೇಶ ರಾಣಗೇರ ಎಂಬ ಬಡವನ ಮನೆಯ ಹೆಂಚು ಹಾಗೂ ತಗಡು ಹಾರಿಹೋಗಿ ಮಳೆಯ ನೀರು ಮನೆಯಲ್ಲಿ ತುಂಬಿ ಮನೆಯ ವಸ್ತುಗಳು ಹಾಳಾಗಿದೆ.
ಜೋಗೇರ ಓಣಿಯ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಮಹ್ಮದ್‌ಗೌಸ್ ತಡಸ್ ಎಂಬುವವರ ಮನೆ ಜಖಂಗೊಂಡಿದೆ. ಮರ ಹಾಗೂ ಲೈಟ್ ಕಂಬ ರಸ್ತೆಗೆ ಅಡ್ಡ ಬಿದ್ದ ಪರಿಣಾಮ ರಸ್ತೆಯ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಮೀನು ಮಾರ್ಕೆಟ್‌ಗೆ ಹೋಗುವ ರಸ್ತೆಗೆ ಗಿಡ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಲಮಾಣಿ ತಾಂಡೆಯಲ್ಲಿ ಮನೆಗಳು, ಚಿಕ್ಕ ನೀರಾವರಿ ಕಂಪೌoಡ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರದ ದೊಡ್ಡ ಟೊಂಗೆ ಬಿದ್ದ ಪರಿಣಾಮ ವಾಹನಗಳು ಜಖಂಗೊಂಡಿದೆ. ಮಳೆಗಾಳಿಯಿಂದ ತತ್ತರಿಸಿದ್ದ ಜನತೆ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ರಾತ್ರಿ ಮತ್ತಷ್ಟು ಕಷ್ಟಪಡುವಂತಾಯಿತು.