ಮುಂಡಗೋಡ: ಪಟ್ಟಣದ ಹೊರ ವಲಯದಲ್ಲಿರುವ ಕಲಘಟಗಿ-ಯಲ್ಲಾಪುರಕ್ಕೆ ಹಾದು ಹೋಗುವ ರಸ್ತೆ ತಿರುವಿನಿಂದ ಕೂಡಿದೆ. ರಸ್ತೆಯ ಅಂಚಿಗೆ ಇರುವ ಅಮ್ಮಾಜಿ ಕೆರೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಅಪೂರ್ಣವಾಗಿದ್ದು ವಾಹನಗಳ ಆಯತಪ್ಪಿ ಕೆರೆಗೆ ಬಿದ್ದು ಅಪಘಾತಗಳು ಸಂಭವಿಸುವ ಸಂಖ್ಯೆ ಹೆಚ್ಚಾಗುತ್ತಿವೆ ಇದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಕೆರೆಯ ಏರಿಗೆ ತಡೆಗೋಡೆ ಇಲ್ಲದಿರುವುದರಿಂದ ವಾಹನ ಚಾಲಕರು ಆಯತಪ್ಪಿ ಕೆರೆಗೆ ಬಿದ್ದರೆ ಹರೋಹರ ಎನ್ನುವಂತಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನ ಹರಿಸದೆ ಇರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ. ಸುಮಾರು 74 ಹೆಕ್ಟೇರ್ ವಿಸ್ತೀರ್ಣದ ಅಮ್ಮಾಜಿ ಕೆರೆಯು ತಾಲೂಕಿನಲ್ಲಿ ದೊಡ್ಡಕೆರೆಯಾಗಿದೆ. ಮಳೆಗಾಲದ ಆರಂಭದ ಮೊದಲೇ ಸಾರ್ವಜನಿಕರ ಮನೆ ಬಳಕೆ ಹಾಗೂ ಚರಂಡಿಗಳ ನೀರಿನಿಂದ ಕೆರೆ 60ರಷ್ಟು ತುಂಬಿದ್ದು, ಯಲ್ಲಾಪುರ-ಕಲಘಟಗಿ ತಾಲೂಕುಗಳಿಗೆ ಓಡಾಡುವ ರಾಜ್ಯ ಹೆದ್ದಾರಿಯಾಗಿದ್ದು ವಾಹನಗಳು ಹಗಲಿರುಳು ನೂರಾರು ಸಂಖ್ಯೆಯಲ್ಲಿ ಓಡಾಡುತ್ತವೆ.
ಹತ್ತು ಹಲವು ಗ್ರಾಮಗಳಿಂದ ಬರುವ ಶಾಲಾ ಮಕ್ಕಳ ವಾಹನಗಳು ಹಾಗೂ ಕಾರವಾರ, ಗೋವಾ ಮತ್ತು ದಾಂಡೇಲಿಗಳತ್ತ ಹೋಗುವ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತವೆ. ಸ್ಥಳೀಯ ದ್ವಿ ಚಕ್ರ ವಾಹನಗಳು ಸಂಚರಿಸುವ ರಸ್ತೆ ಇದಾಗಿರುವುದರಿಂದ ದಿನ ಕಳೆದಂತೆ ಕೆರೆಯ ಮೇಲಿರುವ ತಿರುವಿನ ರಸ್ತೆ ಆಗಿರುವುದರಿಂದ ಮಳೆಗಾಲದಲ್ಲಿ ವಾಹನ ಸವಾರರಿಗೆ ಚಾಲನೆಗೆ ಅಪಾಯ ಮಾಡಿಕೊಂಡು ರಸ್ತೆಯಲ್ಲಿ ಸವಾರರು ಸ್ವಲ್ಪ ಆಯತಪ್ಪಿದರು ಕೆರೆಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವುದಂತು ನಿಜ.
ಕೆರೆಯ ಏರಿಗೆ ತಡೆಗೋಡೆ ಇಲ್ಲದೆ ಕಾಮಗಾರಿ ಅರ್ಧ ಮರ್ದವಾಗಿದ್ದು ಕಳೆದ ಕೆಲವು ವರ್ಷಗಳ ಹಿಂದೆ ತಾಲೂಕಿನ ಕೊಪ್ಪ ಗ್ರಾಮದ ಟೆಂಪೋ ಕೆರೆಗೆ ಬಿದ್ದು ಹತ್ತಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿ ಅದರಲ್ಲಿ ಕೆಲವರು ಇನ್ನುವರೆಗೂ ಅಂಗವಿಕಲರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹಾಗೂ ಕಳೆದ ಆರು ತಿಂಗಳ ಹಿಂದೆ ಬೆಂಗಳೂರಿನ ದಂಪತಿಗಳ ಇಬ್ಬರ ಕಾರು ಕೆರೆಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡರೆ, ೧೫ ದಿನಗಳ ಹಿಂದೆ ಶಿರಸಿಯ ಮಹೀಂದ್ರಾ ಬೊಲೊರೊ ವಾಹನವೊಂದು ಕೆರೆಗೆ ಉರುಳಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ೫-೬ ವರ್ಷಗಳ ಹಿಂದೆ ಬರಗಾಲದ ಹಿನ್ನಲೆಯಲ್ಲಿ ಚಿಕ್ಕ ನಿರಾವರಿ ಇಲಾಖೆಯವರು ದನಕರುಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಂದರೆ ಆಗಬಾರದೆಂದು ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳುವದನ್ನು ನಿಷೇಧಿಸಲಾಗಿತ್ತು. ಕಳೆದ ೬ ವರ್ಷಗಳ ಹಿಂದೆ ಕೆರೆಯ ನೀರನ್ನು ಪೋಲಾಗದಂತೆ ಪಿಚ್ಚಿಂಗ್ ಕಾಮಗಾರಿ ಮಾಡಲಾಗಿತ್ತು, ಅದರಿಂದ ಸ್ವಲ್ಪ ಮಟ್ಟಿಗೆ ಉಪಯೋಗವಾಗಿದ್ದರೂ ಕೂಡ ಕಾಲುವೆಯ ಕಾಮಗಾರಿ ಸಮರ್ಪಕವಾಗಿ ಮಾಡದೆ. ಕೆರೆಯ ನಿರ್ಮಾಣವಾಗಿ ಶತಮಾನಗಳು ಕಳೆದರು ಹೂಳು ತೆಗೆಸದೆ ಕಸ ಕಡ್ಡಿಗಳು ತ್ಯಾಜ್ಯ ತುಂಬಿಕೊಂಡಿದೆ. ಕಳೆದ ಬೇಸಿಗೆಯಲ್ಲಿ ನೀರು ಕಡಿಮೆಯಾಗಿತ್ತು ಹೂಳು ತೆಗೆಸಿದರೆ ದನ ಕರುಗಳು ಹಾಗೂ ಈ ಪಕ್ಷಿಗಳಿಗೆ ಉಪಯೋಗವಾಗುತ್ತಿತ್ತು. ಜನಪ್ರತಿನಿಧಿಗಳು ಅಭಿವೃದ್ಧಿಪಡಿಸುವತ್ತ ಮುಖ ಮಾಡದಿರುವುದು ವಿಪರ್ಯಾಸವೇ ಸರಿ.
ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟರೆ, ಕೆರೆ ನಿರ್ವಹಣೆ ಚಿಕ್ಕ ನೀರಾವರಿ ಇಲಾಖೆ ಸಂಬಂಧ ಪಡುತ್ತದೆ. ಎರಡು ಇಲಾಖೆಗಳು ಹೊಂದಾಣಿಕೆ ಮಾಡಿಕೊಂಡು ತಡೆಗೋಡೆ ಕಾಮಗಾರಿ ಸಂಪುರ್ಣವಾಗಿ ಮಾಡಬೇಕಿತ್ತು. ಎರಡು ಇಲಾಖೆಗಳ ನಿರ್ಲಕ್ಷ್ಯ ದಿಂದ ಸವಾರರು ಜೀವ ತೆರುವಂತಾ ಪರಿಸ್ಥಿತಿ ಉದ್ಭವವಾಗಿದೆ. ಎರಡು ಇಲಾಖೆಗಳ ಸಂವಹನ ಸಮನ್ವತೆಯಿಂದ ತಡೆಗೋಡೆ ನಿರ್ಮಾಣ ಮಾಡುವುದು ಅತಿ ಆವಶ್ಯಕವಾಗಿದೆ.
ಈ ಸಮಸ್ಯೆ ಬಹಳದಿನದಿಂದ ಇದೆ. ಹತ್ತು ಕಲವು ಅಪಘಾತಗಳು ಸಂಭವಿವೆ ಆದರು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಯ ಹಾಗೂ ರಸ್ತೆಯ ಅಭಿವೃದ್ಧಿ ಆಗುತ್ತಿಲ್ಲ ಇದೆ ರೀತಿ ಮುಂದುವರೆದರೆ ತಡೆಗೋಡೆ ನಿರ್ಮಾಣ ಮಾಡದೆ ಹೊದರೆ ಇನ್ನೂ ಹೆಚ್ಚಿನ ಅಪಘಾತಗಳು ಸಂಭವಿಸಿ ಸವಾರರು ಪ್ರಾಣ ತೆಗೆದುಕೊಳ್ಳಬೇಕಾಗುತ್ತದೆ.– ಆಟೋ ಚಾಲಕ ನಾಗರಾಜ
ನಾನು ನಾಳೆ ಸ್ಥಳದಲ್ಲೆ ಬಂದು ನಿಮಗೆ ಮಾಹಿತಿ ನೀಡುತ್ತೇನೆ ಈಗ ನಾನು ಮಾಹಿತಿ ನೀಡಲು ಆಗುವುದಿಲ್ಲ.–ಸಣ್ಣ ನೀರಾವರಿ ಇಲಾಖೆ ಎಇಇ ಟಾಕು ಸುಕ್ರಗೌಡ