ಅಂಕೋಲಾ; ತಾಲೂಕಿನ ಗ್ರಾಮೀಣ ಭಾಗದಿಂದ ವಿವಿಧ ಜಾತಿಯ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದ್ದು ದರವೂ ಇಳಿಕೆಯಾಗಿರುವದರಿಂದ ಹಣ್ಣುಗಳ ರಾಜ ಮಾವಿನ ಹಣ್ಣಿನ ಖರೀದಿ ಜೋರಾಗಿದೆ.
ಮಾವಿನ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ವ್ಯಾಪಾರ ಭರ್ಜರಿಯಾಗಿ ಸಾಗಿದೆ. ನಗರದ ವಿವಿಧ ರಸ್ತೆಗಳಲ್ಲಿ ವಿವಿಧ ಜಾತಿಯ ಮಾವಿನ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕರಿ ಇಷಾಡಿ, ಪೈರಿ, ಚಾಲ್ತಿ, ಮುಶರಾ, ರತ್ನಾಗಿರಿ ಆಪೂಸ್, ನೀಲಂ ಸೇರಿದಂತೆ ಇನ್ನಿತರ ಜಾತಿಯ ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಕಳೆದ ಒಂದು ವಾರದ ಹಿಂದೆ ಮಾವಿನ ಹಣ್ಣಿನ ಬೆಲೆ ಅಧಿಕವಾಗಿ ಇತ್ತು. ಆದರೆ ಇದೀಗ ಕಳೆದ ಎರಡು ಮೂರು ದಿನಗಳಿಂದ ಹಣ್ಣುಗಳ ಬೆಲೆ ಕಡಿಮೆಯಾಗಿರುವದರಿಂದ ಹಣ್ಣುಗಳನ್ನು ಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.
ಕಾರವಾರ ಹಾಗೂ ಅಂಕೋಲಾದ ಗ್ರಾಮೀಣ ಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದ ಮಾವಿನ ಇಳುವರಿ ಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹಣ್ಣುಗಳ ಪ್ರಮಾಣವೂ ಹೆಚ್ಚಾಗಿದೆ. ಕಳೆದ ಒಂದು ವಾರದ ಹಿಂದೆ ಕರಿ ಇಶಾಡ್ ಮಾವಿನ ಹಣ್ಣಿನ ಬೆಲೆ ಒಂದು ಡಜನ್ 500 ರಿಂದ 650 ರು. ಇತ್ತು. ಇದೀಗ 350 ರಿಂದ 200 ರುಪಾಯಿಗೆ ಸಿಗುತ್ತಿದೆ.
ಮುಶರಾ ಡಜನಗೆ 450 ರಿಂದ 500 ಇತ್ತು. 300 ರು.ಗೆ, ಹಾಗೂ 350 ರು.ಇದ್ದ ರತ್ನಾಗಿರಿ ಆಪೂಸ್ ಈಗ 200 ರು.ಗ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗೆ ಎಲ್ಲಾ ಜಾತಿಯ ಮಾವಿನ ಹಣ್ಣಿನ ದರದಲ್ಲಿ ಇಳಿಕೆಯಾಗಿರುವುದರಿಂದ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.