ಯಲ್ಲಾಪುರ; ತಾಲೂಕಿನ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮಿ ದೇವಸ್ಥಾನದಲ್ಲಿ ದೇವಿಯ ವಾರ್ಷಿಕ ವರ್ಧಂತಿ ಉತ್ಸವ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಪ್ರತಿ ವರ್ಷ ದೇವಿಯ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ವರ್ಧಂತಿ ಉತ್ಸವ ನಡೆಯಲಿದ್ದು ಈ ಬಾರಿ ಸಹ ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ನೆರವೇರಿದವು.
ವಿಶೇಷವಾಗಿ ದೇವರ ಸನ್ನಿಧಿಯಲ್ಲಿ ಗಣಪತಿ ಪೂಜೆ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ, ಸಹಸ್ರ ಮೋದಕ ಹವನ, ಸಾನಿಧ್ಯ ಹವನ, ದುರ್ಗಾ ನಮಸ್ಕಾರ, ಪಾರಾಯಣ, ನವಚಂಡಿಕಾ ಹವನ, ಮಹಪೂರ್ಣಹುತಿ, ಧ್ವಜಾ ರೋಹಣ, ಆಶೀರ್ವಚನ ಮುಂತಾದ ದೈವಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶಿವಮೊಗ್ಗ ಜಿಲ್ಲೆಯ ಮತ್ತೂರಿನ ಎಂ ಬಿ ಭಾನುಪ್ರಕಾಶ್ ಪಾಲ್ಗೊಂಡು, ದೇವರ ಸ್ವಪ್ನ ಚರಿತ್ರೆ ಲೇಖನ ಹಾಗೂ ಭಕ್ತಿಗೀತೆಯ ಧ್ವನಿಸುರುಳಿಯನ್ನ ಭಾನು ಪ್ರಕಾಶ್ ಬಿಡುಗಡೆಗೊಳಿಸಿದರು.
ಇದಾದ ನಂತರ ನೂತನ ಧರ್ಮಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ, ಧಾರ್ಮಿಕ ಸಭೆ ನಡೆಸಿದರು. ವರ್ಧಂತಿ ಉತ್ಸವದ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇರರಾದ ಗಣೇಶ್ ಭಂಡಾರಕರ್, ಉಪಾಧ್ಯಕ್ಷರಾದ ಮೋಹನ್ ಭಂಡಾರಕರ್, ಟ್ರಸ್ಟಿಗಳಾದ ಅಕ್ಷಯ್ ಭಂಡಾರಕರ್, ಅಜಯ್ ಭಂಡಾರಕರ್, ರೋಹಿತ್ ಭಂಡಾರಕರ್ ಹಾಗೂ ಸಮಸ್ತಮಂಚಿಕೇರಿ ನಾಗರಿಕರು, ಭಕ್ತರು ಉಪಸ್ಥಿತರಿದ್ದು, ದೇವರ ಸೇವೆಯಲ್ಲಿ ಪಾಲ್ಗೊಂಡರು.