ಯಲ್ಲಾಪುರ: ಶಾಲಾ ಪ್ರಾರಂಭೋತ್ಸವ ದಿನದಂದೇ ತಾಲೂಕಿನ ಶಾಲೆಯೊಂದರಲ್ಲಿ ಸೂತಕದ ಛಾಯೆ ಆವರಿಸಿದೆ. ಶಿಕ್ಷಕರೋರ್ವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದದ್ದಾರೆ.
ತಾಲೂಕಿನ ಭರಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರಮೇಶ ಎಚ್.ನಾಯ್ಕ (51) ಶಾಲಾ ಪ್ರಾರಂಭೋತ್ಸವಕ್ಕಾಗಿ ತಾವು ವಾಸ್ತವ್ಯವಿದ್ದ ಕುಂದರ್ಗಿಯಲ್ಲಿಯ ಮನೆಯಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಿ ಶಾಲೆಗೆ ತೆಗೆದುಕೊಂಡು ಹೊರಟಿದ್ದ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಕುಂದರ್ಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಿಕ್ಷಕ ದಿ.ರಮೇಶ ಎಚ್ ನಾಯ್ಕ ಮೂಲತಃ ಕುಮಟಾ ತಾಲೂಕಿನ ಕಾಗಲ್ ಗ್ರಾಮದ ನಿವಾಸಿಯಾಗಿದ್ದರು. ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಅವರು, 6 ತಿಂಗಳ ಹಿಂದೆ ಅವರ ತಾಯಿ ಕೂಡ ವಿಧಿವಶರಾಗಿದ್ದರು. 2016 ರಲ್ಲಿ ಯಲ್ಲಾಪುರ ತಾಲೂಕಿಗೆ ವರ್ಗಾವಣೆಗೊಂಡು ಭರಣಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು, ಕುಂದರ್ಗಿ ಆಗೇರ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಪತ್ನಿ ಪೂರ್ಣಿಮಾ ನಾಯ್ಕ ಹಾಗೂ ಓರ್ವ ಪುತ್ರ ಮತ್ತು ಅಪಾರ ಬಂಧು-ಬಳಗ ಮಿತ್ರರನ್ನು ಅಗಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀರಾಮ ಹೆಗಡೆ, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ಭಟ್ಟ, ರಮೇಶ್ ನಾಯ್ಕ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಶಿಕ್ಷಕರಾದ ಗಂಗಾಧರ ಪಟಗಾರ, ಭಾಸ್ಕರ ನಾಯ್ಕ, ಅರವಿಂದ ನಾಯ್ಕ, ರಾಮಕೃಷ್ಣ ಭಂಡಾರಿ, ಮಾರುತಿ ನಾಯ್ಕ, ಚಂದ್ರಹಾಸ ನಾಯ್ಕ, ಬಿಇಓ ಕಚೇರಿಯ ಮಂಜುನಾಥ ನಾಯ್ಕ ಮುಂತಾದವರು ರಮೇಶ ನಾಯ್ಕ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ ಅವರ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.