ಸಿದ್ದಾಪುರ: ತಾಲೂಕಿನ ವಾಜಗೋಡ ಪಂಚಾಯತದವರು ಐಸೂರಿನಲ್ಲಿ ಘನತ್ಯಾಜ್ಯ ಘಟಕವನ್ನು ಸ್ಥಾಪಿಸಲು ಮುಂದಾದ ಕುರಿತು ಹೈಕೋರ್ಟ್‍ನ ಗ್ರೀನ್ ಬೆಂಚ್ ತರಾಟೆಗೆ ತೆಗೆದುಕೊಂಡಿದೆ ಎಂದು ಹಿರಿಯ ವಕೀಲ ಎನ್.ಡಿ.ನಾಯ್ಕ ಐಸೂರು ಹೇಳಿದ್ದಾರೆ.
ಪಂಚಾಯತದವರು ಘನತ್ಯಾಜ್ಯ ಘಟಕ ಸ್ಥಾಪಿಸಲು ಕಾರ್ಯಪ್ರವೃತ್ತರಾಗಿದ್ದಾಗ ಅದನ್ನು ವಿರೋಧಿಸಿ ಸಾರ್ವಜನಿಕರು ಪಂಚಾಯತಕ್ಕೆ ಮನವಿ ಸಲ್ಲಿಸಿದ್ದರು. ಘನತ್ಯಾಜ್ಯ ಘಟಕ ಸ್ಥಾಪಿಸಲು ಗುರುತಿಸಿದ ಸ್ಥಳದ ಸುತ್ತಮುತ್ತ ಮನೆಗಳಿದ್ದು, ಕುಡಿಯುವ ನೀರಿನ ಬಾವಿಗಳಿವೆ. ಹತ್ತಿರದಲ್ಲಿಯೇ ಹಳ್ಳ ಹರಿದಿದ್ದು, ಈ ಹಳ್ಳದ ನೀರನ್ನು ಐಸೂರು ಊರಿನ ಜನರು ಕುಡಿಯಲು ಉಪಯೋಗಿಸುತ್ತಿದ್ದಾರೆ. ಸನಿಹದಲ್ಲಿ ಇರುವ ದೇವಸ್ಥಾನಕ್ಕೆ ಕೂಡಾ ಇದೇ ನೀರನ್ನು ಬಳಸುತ್ತಿದ್ದಾರೆ. ಪ್ರಾಣಿ, ಪಕ್ಷಿಗಳಿಗೂ ದಾಹ ನೀಗಿಸಲು ಈ ನೀರಿನ ಮೂಲವೇ ಆಶ್ರಯವಾಗಿದೆ. ಘನತ್ಯಾಜ್ಯ ಘಟಕವನ್ನು ಇಲ್ಲಿ ಸ್ಥಾಪಿಸಿದಲ್ಲಿ ನೀರಿನ ಮೂಲ ಕೆಡುವ ಜೊತೆಯಲ್ಲಿ ಪರಿಸರದ ಮೇಲೂ ಕೆಟ್ಟ ಪರಿಣಾಮವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಈ ಕುರಿತು ಉಪ ತಹಶೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿ ಘನತ್ಯಾಜ್ಯ ಘಟಕ ಸ್ಥಾಪಿಸುವ ಸ್ಥಳದ ಹತ್ತಿರ ವಾಸ್ತವ್ಯ ಇರುವ ಬಗ್ಗೆ, ನೀರಿನ ಹಳ್ಳ ಇರುವ ಬಗ್ಗೆ, ಬಾವಿ ಇರುವ ಬಗ್ಗೆ, ದೇವಸ್ಥಾನ ಇರುವ ಬಗ್ಗೆ, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹಳ್ಳದ ನೀರನ್ನು ಉಪಯೋಗಿಸುತ್ತಿರುವ ವಿಚಾರವನ್ನು ತಮ್ಮ ಪಂಚಾನಾಮೆಯಲ್ಲಿ ಉಲ್ಲೇಖಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗಲೂ ಪಂಚಾಯತದವರು ಘನತ್ಯಾಜ್ಯ ಘಟಕವನ್ನು ಸ್ಥಾಪಿಸಲು ಮುಂದಾದಾಗ ನಿರ್ಮಿಸಲು ಹೊರಟಿರುವ ಘನ ತ್ಯಾಜ್ಯ ಘಟಕದ ಕುರಿತು ರಾಜ್ಯ ಹೈಕೋರ್ಟ್ ಗ್ರೀನ್ ಬೆಂಚ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಪಂಚಾಯತವನ್ನು ತರಾಟೆಗೆ ತೆಗೆದುಕೊಂಡಿದೆ. ಸಾರ್ವಜನಿಕರು ಹಾಗೂ ಕಂದಾಯ ಅಧಿಕಾರಿಗಳು ತಯಾರಿಸಿದ ಪಂಚನಾಮೆಯನ್ನು ಪರಿಗಣಿಸಿ ಪರಿಸರಕ್ಕೆ ಧಕ್ಕೆಯಾಗದಂತೆ ಪರಿಸರ ಕಾನೂನಿನ ಅಡಿಯಲ್ಲಿ, ಅರ್ಜಿದಾರರ ಇನ್ನೂ ಹೆಚ್ಚಿನ ಹೇಳಿಕೆಯನ್ನು ಪಡೆದುಕೊಂಡು 3 ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಆದೇಶ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಮುಖ್ಯಮಂತ್ರಿಗಳಿಗೂ ಸಹ ಈ ವಿಚಾರದ ಕುರಿತು ಮನವಿ ಸಲ್ಲಿಸಿದ್ದರು. ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಂದಲೂ ಆದೇಶವಾಗಿದೆ ಎಂದು ತಿಳಿಸಿರುವ ನಾಯ್ಕ, ಹೈಕೋರ್ಟಿನ ಗ್ರೀನ್ ಬೆಂಚಿನ ಈ ಆದೇಶವು ಪರಿಸರಕ್ಕೆ ಸಂಬಂಧಪಟ್ಟದ್ದಾಗಿದೆ. ಇದೇ ರೀತಿ ತಾಲೂಕಿನ ಇನ್ನೂ ಕೆಲವು ಪಂಚಾಯತದಲ್ಲಿ ಪರಿಸರ ಕಾನೂನನ್ನು ಲೆಕ್ಕಿಸದೇ ಕಸದ ವಿಲೇವಾರಿಗಾಗಿ ಘನತ್ಯಾಜ್ಯ ಘಟಕ ನಿರ್ಮಿಸುತ್ತಿರುವುದು ತಿಳಿದುಬಂದಿದೆ. ಈ ಬಗ್ಗೆ ಜಿಲ್ಲಾ ಪರಿಸರ ಇಲಾಖೆಯವರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.