ದಾಂಡೇಲಿ; ಕಳೆದ ಒಂದು- ಒಂದೂವರೆ ವರ್ಷಗಳ ಹಿಂದೆ ಅತಿಕ್ರಮಿಸಿ ನಿರ್ಮಿಸಲಾದ ಮನೆಗಳ ತೆರವಿಗಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರೊಂದಿಗೆ ಬಂದ ಗ್ರಾಮ ಪಂಚಾಯತಿ ಪಿಡಿಓ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಂಡೇಲಪ್ಪ ನಗರದಲ್ಲಿ ನಡೆದಿದೆ.
ದಾಂಡೇಲಪ್ಪ ನಗರದಲ್ಲಿ ಈರಯ್ಯಾಗಣಾಚಾರಿ ಮತ್ತು ಮಹಾದೇವ ಗಾಟಿಗೇರ ಎಂಬಿಬ್ಬರು ಕಳೆದ ಒಂದು-ಒಂದೂವರೆ ವರ್ಷಗಳ ಹಿಂದೆ ಜಾಗವನ್ನು ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ.ಮನೆ ನಿರ್ಮಾಣ ಸಂದರ್ಭದಲ್ಲಿ ಸುಮ್ಮನಿದ್ದ ಆಲೂರು ಗ್ರಾಮ ಪಂಚಾಯ್ತಿ ಮನೆ ನಿರ್ಮಿಸಿ ವರ್ಷ ದಾಟಿದ ಬಳಿಕ ಅಂಗನವಾಡಿ ನಿರ್ಮಾಣದ ಉದ್ದೇಶದಿಂದ ಮನೆ ತೆರವಿಗೆ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ್ದರೂ ಮನೆ ತೆರವುಗೊಳಿಸದಿರುವುದರಿಂದ ಇಂದು ಗ್ರಾಮ ಪಂಚಾಯ್ತ ಅಧ್ಯಕ್ಷರಾದ ಲಕ್ಷಣ ಜಾಧವ ಅವರ ಜೊತೆ ಪಿಡಿಓ ಸಂತೋಷ ಅವರು ಸಿಬ್ಬಂದಿಗಳೊಂದಿಗೆ ಹಾಗೂ ಪೊಲೀಸ್ ಭದ್ರತೆಯೊಂದಿಗೆ ತೆರವಿಗೆ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ಸುಭಾಸ ಬೋವಿವಡ್ಡರ ಹಾಗೂ ಕೃಷ್ಣ ಬೋವಿವಡ್ಡರ್ ಸೇರಿದಂತೆ ತೆರವು ಕಾರ್ಯವನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಪಿಡಿಓ ಸಂತೋಷ್, ಸುಭಾಸ ಬೋವಿವಡ್ಡರ ಹಾಗೂ ಕೃಷ್ಣಬೋವಿವಡ್ಡರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮನೆಯಲ್ಲಿ ವಾಸ್ತವ್ಯವಿರುವ ಈರಯ್ಯಾ ಗಣಾಚಾರಿ ಮತ್ತು ಮಹಾದೇವ ಯಲ್ಲಪ್ಪ ಗಾಟಿಗೇರ ಅವರುಗಳು ಮನೆ ತೆರವು ಮಾಡದಂತೆ ಮನವಿ ಮಾಡುತ್ತಲೇ ಇದ್ದರು.
ಈ ನಡುವೆ ಮಧ್ಯಪ್ರವೇಶಿಸಿದ ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ ಅವರು ಗ್ರಾಮ ಪಂಚಾಯ್ತು ಅಧ್ಯಕ್ಷರಾದ ಲಕ್ಷಣ ಜಾಧವ ಮತ್ತು ಪಿಡಿಓ ಸಂತೋಷ್ ಅವರಿಗೆ ಈ ಎರಡು ಕುಟುಂಬಗಳಿಗೆ ಸೂಕ್ತ ಜಾಗದ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಕೂಡಲೆ ವಿಶೇಷ ಸಭೆಯನ್ನು ಕರೆಯುವಂತೆ ಸೂಚನೆ ನೀಡಿದ ಬಳಿಕ ಸಧ್ಯಕ್ಕೆ ಸಮಸ್ಯೆ ಶಮನಗೊಂಡಂತಾಗಿದೆ. ಈ ಸಂದರ್ಭದಲ್ಲಿ ದಾಂಡೇಲಿ ಗ್ರಾಮೀಣ ಪಿಎಸ್ಕೆ ಐ. ಆರ್.ಗಡೇಕರ ಅವರ ನೇತೃತ್ವದ ಪೊಲೀಸ್ ತಂಡ ಹಾಗೂ ಸ್ಥಳೀಯರು ಇದ್ದರು.