ಕಾರವಾರ; ಶ್ರೀಲಂಕಾದಲ್ಲಿ ಅರಾಜಕತೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನ ಶ್ರೀಲಂಕಾ ತೊರೆದು ಸಮುದ್ರ ಮಾರ್ಗದಲ್ಲಿ ಭಾರತಕ್ಕೆ ನುಸುಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರವಾರದಿಂದ ಮಂಗಳೂರುವರೆಗಿನ ರಾಜ್ಯದ ಸಮುದ್ರದ ತೀರಗಳಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆ ಕಟ್ಟೆಚ್ಚರವಹಿಸಿ ಕಣ್ಗಾವಲು ನಡೆಸುತ್ತಿದೆ. ಕರಾವಳಿ ಕಾವಲು ಪೊಲೀಸ್ ಪಡೆಯ ಗಸ್ತು ಕಾರ್ಯಾಚರಣೆಗೆ ನೌಕಾಸೇನೆ ಹಾಗೂ ಕೋಸ್ಟ್‌ಗಾರ್ಡ್ ಕೂಡ ನೆರವು ನೀಡುತ್ತಿದ್ದು, ಜಂಟಿಯಾಗಿ ಕರಾವಳಿ ತೀರದ ಉದ್ದಕ್ಕೂ ಗಸ್ತು ಕಾರ್ಯಾಚರಣೆ ತೀವ್ರತೆ ಹೆಚ್ಚಿಸಲಾಗಿದೆ.
ಈ ಬೆಳವಣಿಗೆ ಕುರಿತು ಮಾತನಾಡಿದ ಕರಾವಳಿ ಕಾವಲು ಪೊಲೀಸ್ ಪಡೆಯ ಉಡುಪಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅಂಶುಕುಮಾರ್, ಕಾರವಾರದಿಂದ ಮಂಗಳೂರುವರೆಗಿನ ಕರ್ನಾಟಕ ಕರಾವಳಿ ತೀರದಲ್ಲಿ ಪ್ರತಿದಿನ ಗಸ್ತು ಮೂಲಕ ಕಣ್ಣಾವಲು ಇರಿಸಲಾಗಿದೆ. ಆದರೆ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅರಾಜಕತೆ ಉಂಟಾದ ನಂತರದಲ್ಲಿ ಅಲ್ಲಿಂದ ಜನರು ಅಕ್ರಮವಾಗಿ ಭಾರತ ನುಸುಳುವ ಆತಂಕ ಇರುವ ಕಾರಣಕ್ಕಾಗಿ ಕಾರವಾರದಿಂದ ಮಂಗಳೂರುವರೆಗಿನ ಕರ್ನಾಟಕದ ಕರಾವಳಿ ತೀರದಲ್ಲಿ ಗಸ್ತು ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದೆ.ಬಹಳ ಮುತುವರ್ಜಿಯಿಂದ ಕರಾವಳಿ ತೀರದ ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಕಣ್ಣಾವಲು ಇರಿಸಲಾಗಿದೆ ಎಂದು ತಿಳಿಸಿದ್ದಾರೆ.