ಕಾರವಾರ: ‘ಭೂಮ್ತಾಯಿ – ಮೂಲ, ವಿವಾದ ಮತ್ತು ವಾಸ್ತವ’ ಪುಸ್ತಕ ಲೋಕಾರ್ಪಣೆಗೊಂಡು ತಿಂಗಳು ಪೂರ್ಣಗೊಳ್ಳುವುದರೊಳಗೆ ದ್ವಿತೀಯ ಮುದ್ರಣ ಕಾಣುತ್ತಿರುವುದು ಲೇಖಕರ ಅಧ್ಯಯನಶೀಲತೆಗೆ ಸಾಕ್ಷಿಯಾಗಿದೆ ಎಂದು ಹಿರಿಯ ಪತ್ರಕರ್ತ ವಿಠಲದಾಸ ಕಾಮತ ಅಭಿಪ್ರಾಯಪಟ್ಟರು.
ಅವರು, ದ್ವಿತೀಯ ಮುದ್ರಣಗೊಂಡ “ಭೂಮ್ತಾಯಿ ” ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ,ಈ ಪುಸ್ತಕವು ಅಧ್ಯಯನ ಮತ್ತು ಸಂಗ್ರಹ ಯೋಗ್ಯ ಕೃತಿಯಾಗಿದ್ದು, ಈ ಭಾಗದ ಗ್ರಾಮ ದೇವತೆಗಳ ಆಮೂಲಾಗ್ರ ಮಾಹಿತಿಯನ್ನು ಇದು ಒಳಗೊಂಡಿದೆ. ಪುಸ್ತಕವನ್ನು ಕೊಂಡು ಓದುವವರ ಸಂಖ್ಯೆಯೇ ಕಡಿಮೆಯಾಗಿರುವ ಈ ಕಾಲದಲ್ಲಿ, ಭೂಮಾಯಿ ಪುಸ್ತಕ ಬಿಡುಗಡೆಗೊಂಡ ಒಂದು ತಿಂಗಳಲ್ಲಿಯೇ ಎರಡನೆಯ ಮುದ್ರಣ ಕಾಣುತ್ತಿರುವುದು ಜಿಲ್ಲೆಯ ಮಟ್ಟಿಗೆ ದಾಖಲೆಯೇ ಸರಿ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ರೀತಿ ಈ ಭಾಗದಲ್ಲಿ ನಡೆಯುವ ಬಂಡಿಹಬ್ಬದ ಆಚರಣೆಗಳ ಕುರಿತು ಜನರಲ್ಲಿ ಸಾಕಷ್ಟು ಕುತೂಹಲ, ಆಸಕ್ತಿಗಳಿದ್ದು ಲೇಖಕರು ಈ ಬಗ್ಗೆಯೂ ಬೆಳಕು ಚೆಲ್ಲುವಂತಾಗಲಿ ಎಂದು ಹಾರೈಸಿದರು.
ಲೇಖಕ ವಿಶ್ವೇಶ್ವರ ಗುನಗಾ ಮಾತನಾಡಿ ಭಕ್ತರು ಮತ್ತು ಸಾಹಿತ್ಯಾಸಕ್ತರು ಪ್ರೀತಿ, ಆದರಗಳಿಂದ “ಭೂಮ್ತಾಯಿ” ಪುಸ್ತಕವನ್ನು ಓದಿ ಪ್ರೋತ್ಸಾಹಿಸಿರುವುದರ ಬಗ್ಗೆ ನಾನು ತುಂಬಾ ಆಭಾರಿಯಾಗಿದ್ದೇನೆ ಎಂದು ಹೇಳಿದರು.
ವಾಸುದೇವ ಗುನಗಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಅರುಣ ಗುನಗಾ ಸ್ವಾಗತಿಸಿದರು ಜಗದೀಶ ಗುನಗಾ ವಂದಿಸಿದರು.