ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಉತ್ತರ ಕನ್ನಡ, ಎನ್.ಪಿ.ಸಿ.ಐ.ಎಲ್ ಕೈಗಾ, ಅರಣ್ಯ ಇಲಾಖೆ ಕಾರವಾರ ವಿಭಾಗ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ಬೇಸಿಗೆ ಶಿಬಿರವನ್ನು ಮೇ 9ರಿಂದ 15ರವರೆಗೆ ನಗರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶಿವಾಜಿ ಬಿ.ಎಡ್. ಕಾಲೇಜಿನ ಉಪನ್ಯಾಸಕ ನವೀನ್ ದೇವರಭಾವಿ ಹಾಗೂ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಉಪನ್ಯಾಸಕ ಶಿವಾನಂದ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸದಸ್ಯ ಕಾರ್ಯದರ್ಶಿ ಡಾ|| ಸಂಜೀವ ದೇಶಪಾಂಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಬಾಡದ ಪ್ರೀಮಿಯರ್ ಕಾಲೇಜು ಕಲಾ ಶಿಕ್ಷಕ ಗಣೇಶ ಬಾಡಕರ್ ಇವರು ಶಿಬಿರಾರ್ಥಿಗಳಿಗೆ ಮಣ್ಣಿನ ಮಾದರಿಗಳನ್ನು ಮಾಡುವ ವಿಧಾನ ತಿಳಿಸಿ ಶಿಬಿರಾರ್ಥಿಗಳಿಂದಲೇ ಮಣ್ಣಿನ ಮಾದರಿಗಳನ್ನು ಮಾಡಿಸಿದರು.
ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಶಿಬಿರಾರ್ಥಿಗಳಿಗೆ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಕ್ಕೆ ಸಂಬಂಧ ಪಟ್ಟ ಹಲವಾರು ಮಾದರಿಗಳನ್ನು ಶಿಬಿರಾರ್ಥಿಗಳಿಂದ ತಯಾರಿಸಿ ವಿವರಿಸಿದರು. ಜಿಲ್ಲಾ ಪ್ರಯೋಗಾಲಯದ ಸಿಬ್ಬಂದಿ ಉಷಾ ನೀರಿನ ಗುಣಮಟ್ಟದ ಬಗ್ಗೆ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಜೀವವೈವಿದ್ಯತೆಯ ವಿಜ್ಞಾನಿ ಓಂಕಾರ ಪೈ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪಕ್ಷಿ ವೀಕ್ಷಣೆ ಹಾಗೂ ಜೀವವೈವಿಧ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಲಾಯಿತು. ಎನ್ ಪಿ ಸಿಎಲ್ ಅಧಿಕಾರಿ ಆಶಿಶ್ ಲಾಲ್ ಶಿಬಿರಾರ್ಥಿಗಳಿಗೆ ಕೈಗಾ ಅಣು ಶಕ್ತಿ ಕೇಂದ್ರ ಹೇಗೆ ಕಾರ್ಯ ನಿರ್ವಹಿಸುತ್ತದೆ. ವಿದ್ಯುತ್ ಶಕ್ತಿಯನ್ನು ಹೇಗೆ ತಯಾರಿಸಲಾಗುತ್ತದೆ ಇದರಿಂದ ಬಿಡುಗಡೆಯಾಗುವ ವಿಕಿರಣದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಜನ ಸಾಮಾನ್ಯರಲ್ಲಿ ಇರುವ ತಪ್ಪು ನಂಬಿಕೆಯನ್ನು ಹೋಗಲಾಡಿಸಬಹುದು ಎಂದು ತಿಳಿಸಿಕೊಟ್ಟರು.
ಶಿರಸಿ ಬೈರುಂಬೆ ಪ್ರೌಢ ಶಾಲೆ ಪ್ರಾಂಶುಪಾಲ ವಸಂತ ಹೆಗಡೆ ಹಾಗೂ ವಿಭವ ಹೆಗಡೆ ಹಾಗೂ ಹರ್ಷ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಖಗೋಳಶಾಸ್ತ್ರ ಆಧಾರಿತ ಚಟಿವಟಿಕೆಯನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಕೊನೆಯ ದಿನ ಸಿಎಂಎಫ್‌ಐಆರ್ ತಾಂತ್ರಿಕ ಸಹಾಯಕ ಪ್ರವೀಣ ದುಬೆ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿದರು. ಶಿಬಿರದಲ್ಲಿ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.