ಸಿದ್ದಾಪುರ: ಹಳ್ಳಿಗಳು ಬರಿದಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅಧುನಿಕ ತಂತ್ರಜ್ಞಾನದ ಭಾಗವಾದ ಅಂತರ್ಜಾಲವನ್ನು ಬಳಸಿಕೊಂಡು ಗ್ರಾಮಸ್ಥರ ಸಂಘಟನೆಗೆ ಮುಂದಾದ ಸಂಪಖಂಡ ಗ್ರಾಮ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದೆ.
ತಾಲೂಕಿನಿಂದ 20 ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಸಂಪಖಂಡ ಊರಿನ ಸುತ್ತಮುತ್ತ ಪ್ರಕೃತಿಯ ಸೊಬಗು ಚಾಚಿಕೊಂಡಿದೆ. ಈ ಗ್ರಾಮದಲ್ಲಿ 1957 ಕ್ಕಿಂತ ಮೊದಲು ಕೇವಲ ನಾಲ್ಕು ಕುಟುಂಬಗಳು ಮಾತ್ರ ಇತ್ತು. ಗ್ರಾಮದಲ್ಲೀಗ ಹಾಲಿ 24 ಮನೆ, 130 ಜನಸಂಖ್ಯೆಯುಳ್ಳ ಈ ಪುಟ್ಟ ಗ್ರಾಮ ವಾಜಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ.
ಪ್ರಕೃತಿ ಸೌಂದರ್ಯದ ರಾಶಿಯನ್ನೇ ಹೊದ್ದು ಮಲಗಿರುವ ಗ್ರಾಮದಲ್ಲಿ ಯುವಕರ ನಗರ ಪಲಾಯನ ದೊಡ್ಡ ಸಮಸ್ಯೆ ಆಗಿದೆ. ಆದರೆ ಇರುವ ಉತ್ಸಾಹಿ ಯುವಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮದ ಸಂಘಟನೆಗೆ ಮುಂದಾಗಿದ್ದಾರೆ. ಗ್ರಾಮಸ್ಥರನೆಲ್ಲ ಸೇರಿಸಿ ಒಂದು ವಾಟ್ಸಪ್ ಮತ್ತು ಫೇಸ್ ಬುಕ್ ಗ್ರೂಪ್ ರಚಿಸಲಾಗಿದೆ. ಇದರ ಮೂಲಕ ಗ್ರಾಮಸ್ಥರು ಎಲ್ಲೇ ಇದ್ದರೂ ಊರಿನ ಸಂಬಂಧ ಮರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಹಬ್ಬಮುಂತಾದ ವಿಶೇಷ ದಿನಗಳಲ್ಲಿ ಇಲ್ಲಿನ ಯುವಕರು ನಮ್ಮೂರು ಸಂಪಖಂಡ ಎಂಬ ವಾಟ್ಸಪ್ ಗ್ರೂಪ್ ಮೂಲಕ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸುತ್ತಿದ್ದು,ವಿಜೇತರಿಗೆ ಕನ್ನಡದ ಪುಸ್ತಕ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಯುವಕರು ಯುವತಿಯರು, ಸೊಸೆಯಂದಿರು, ನೌಕರಸ್ಥರು ಹೀಗೆ ಊರಿನ ಜನತೆ ಮಾತ್ರ ಗ್ರುಪ್‌ನಲ್ಲಿ ಇದ್ದು ಕಾರ್ಯಕ್ರಮದದಲ್ಲಿ ಭಾಗವಹಿಸುತ್ತಿದ್ದಾರೆ. ಮೊಬೈಲನ್ನು ಬೇರೆಬೇರೆ ಉದ್ದೇಶಗಳಿಗೆ ಬಳಸುವ ಬದಲು ಗ್ರಾಮಸ್ಥರನ್ನು ಒಂದೆಡೆ ಸೇರಿಸುವ ಕಾರ್ಯಕ್ಕೆ ಬಳಸುತ್ತಿರುವ ಯುವಕರ ಕಾರ್ಯಕ್ಕೆ ಹಿರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.