ಯಲ್ಲಾಪುರ:ಓದಿದ ಮಾತ್ರಕ್ಕೆ ಬರವಣಿಗೆ ಸಿದ್ದಿಸುವುದಿಲ್ಲಾ. ಬರವಣಿಗೆ ಒಂದು ಸವಾಲಿನ ಕೆಲಸ.ಅದಕ್ಕೆ ಪರಿಶ್ರಮ ಬೇಕು ಎಂದು ಬೆಂಗಳೂರು ಜಿಲ್ಲಾ ಸತ್ರನ್ಯಾಯಾಧೀಶ ನರಹರಿ ಪ್ರಭಾಕರ ಮರಾಠೆ ಹೇಳಿದರು.
ಅವರು ರವಿವಾರ ಸಂಜೆ ತಾಲ್ಲೂಕಿನ ಗುಳ್ಳಾಪುರ ಸಮೀಪದ ಹೆಗ್ಗಾರಿನ ಗುಡ್ಡೆಮನೆಯ ಸಮೃದ್ಧಿ ಮನೆಯಂಗಳದಲ್ಲಿ ಬರಹಗಾರ್ತಿ ಪಲ್ಲವಿ ಪ್ರಸನ್ನ ಭಟ್ಟರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ .ಅಕ್ಷರದ ಸೇವಾ ಕಾರ್ಯಕ್ಕೆ ಪ್ರೋತ್ಸಾಹ ಸಿಗಬೇಕು ಎಂದರು.
ಭಾವಪಲ್ಲವಿ ಸಂಕಲನವನ್ನು ಬರಹಗಾರ ಎಲ್ ವಿ ಭಟ್ಟ ಲೋಕಾರ್ಪಣೆಗೊಳಿಸಿದರು. ಪಲ್ಲವಿ ಪ್ರಸನ್ನರ ಭಾವದಲೆಗಳ ಮೌನಯಾನ ಗಜಲ್ ಸಂಕಲನವನ್ನು ಪತ್ರಕರ್ತ ವಿಠ್ಠಲದಾಸ ಕಾಮತ್ ಬಿಡುಗಡೆ ಗೊಳಿಸಿ ಮಾತನಾಡಿ, “ಗ್ರಾಮೀಣ ಭಾಗದಲ್ಲಿ ಅರಳುವ ಸಾಹಿತ್ಯದಲ್ಲಿ ಸತ್ವವಿದೆ. ಪಲ್ಲವಿ ಭಟ್ಟರ ಕಾವ್ಯದ ಬರವಣಿಗೆಯಲ್ಲಿ ಬದುಕಿನ ಅನುಭವವಿದೆ. ಕುತೂಹಲದ ಬೆರಗು ಇದೆ. ಬರವಣಿಗೆಗೆ ಮತ್ತು ಬದುಕಿಗೆ ಸಾಮ್ಯತೆ ಇರಬೇಕು. ಇಂದು ಬದುಕಿನ ರೋಮಾಂಚನವನ್ನೇ ಕಳೆದುಕೊಳ್ಳುವ ಬಗೆಗೆ ವಿಷಾದವಿದೆ. ಬರವಣಿಗೆಯಂತೆ ನಾವು ಬದುಕಿದರೆ ಸಾಹಿತ್ಯವನ್ನು ಅನುಭವಿಸಬಹುದು. ಜೊತೆಗೆ ಅಕ್ಷರ ಪ್ರೀತಿಯಿಂದ ಬದುಕನ್ನು ಬರೆದರೆ ಬೆಳೆಯಬಹುದು” ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹರಿನರಸಿಂಹ ಉಪಾಧ್ಯಾಯರವರು ಮಾತನಾಡಿ, ಸಾಹಿತ್ಯ ಚಲನಶೀಲವಾದದ್ದು.ಯಕ್ಷಗಾನ ಕಲೆ ಈ ಭಾಗದಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿದೆ. ಭಾಷೆಯ ಬಗೆಗಿನ ಗೌರವ ಸಾಹಿತ್ಯದ ಮೂಲಧಾತುವಾಗಿದೆ. ಸಾಹಿತ್ಯಕ್ಕೆ ಅನಾವರಣಗೊಳ್ಳುವ ಗುಣ ಹೊಂದಿದೆ. ಅದು ಭಾವನೆಯಲ್ಲಿ ಕರಗುವಿಕೆಯಲ್ಲಿ ಯಶಪಡೆಯುತ್ತದೆ ಎಂದರು.
ಭಾವಪಲ್ಲವಿ ಸಂಕಲನವನ್ನು ಮಧುಕೇಶವ ಭಾಗ್ವತ, ಮತ್ತು ಭಾವದಲೆಗಳ ಮೌನಯಾನ ಕೃತಿಯನ್ನು ಬರಹಗಾರ್ತಿ ಸ್ಮಿತಾ ರಾಘವೇಂದ್ರ ಪರಿಚಯಿಸಿದರು.
ಕವಯತ್ರಿ ಪಲ್ಲವಿ ಪ್ರಸನ್ನ ಭಟ್ಟ, ಶುಭಾ ನಾಗರಾಜ, ಸಾಮಾಜಿಕ ಕಾರ್ಯಕರ್ತರಾದ ಶಿವರಾಮ ಗಾಂವ್ಕಾರ, ಕನಕನಹಳ್ಳಿ ಗಣಪತಿ ಭಟ್ಟ ಗುಡ್ಡೆ, ಪ್ರಸನ್ನ ಭಟ್ಟ,ಮುಂತಾದವರಿದ್ದರು.
ಶಶಿಕಲಾ ಭಟ್ಟ ಪ್ರಾರ್ಥಿಸಿದರು. ಗಣಪತಿ ಭಟ್ಟ ಗುಡ್ಡೆ ಸ್ವಾಗತಿಸಿದರು. ರಮೇಶ ಭಟ್ಟ ನಿರೂಪಿಸಿದರು.