ಅಂಕೋಲಾ:ಪಟ್ಟಣದ ಪಿ.ಎಂ. ಹೈಸ್ಕೂಲ್ ರೈತಭವನದಲ್ಲಿ ಶ್ರೀ ನಾರಾಯಣಗುರು ವೇದಿಕೆ ವತಿಯಿಂದ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವೈದ್ಯ ಡಾ.ಕರುಣಾಕರ ಎಂ.ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ವಿದ್ಯಾರ್ಥಿಗಳು ಗುರುತಿಸಿಕೊಳ್ಳಲು ಸಾಧ್ಯ. ಹೀಗಾಗಿ ಶ್ರೀ ನಾರಾಯಣಗುರು ವೇದಿಕೆಯವರು ತಾಲೂಕು ಮಟ್ಟದ ನಾಮಧಾರಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಶ್ಲಾಘನೀಯ. ಮುಂದೆ ನಡೆಯುವ ಎಲ್ಲ ಪ್ರತಿಭಾ ಪುರಸ್ಕಾರಗಳಿಗೆ ಹಾಗೂ ಇನ್ನಿತರ ಉತ್ತಮ ಕಾರ್ಯಗಳಿಗೆ ಸದಾ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿಜಯಕುಮಾರ ಆರ್.ನಾಯಕ ಮಾತನಾಡಿ, ಸಂಘಟನೆಯಿಂದ ಸಮಾಜವನ್ನು ಕಟ್ಟಲು ಸಾಧ್ಯ. ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ಸಮಾಜದ ಗೌರವ ಹೊಂದಿರಬೇಕು. ಪರಸ್ಪರ ಹೊಂದಾಣಿಕೆ ಇದ್ದಾಗ ಮಾತ್ರ ಪ್ರತಿಯೊಬ್ಬ ವ್ಯಕ್ತಿಯು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಉಪತಹಶೀಲ್ದಾರ ಶ್ರೀಧರ ಎ.ನಾಯ್ಕ, ವಿದ್ಯಾರ್ಥಿಗಳಿಗೆ ಇಂತಹ ಪ್ರತಿಭಾ ಪುರಸ್ಕಾರಗಳು ಆಗಾಗ ನಡೆಯುತ್ತಿದ್ದರೆ ಅವರಿಗೂ ಕೂಡ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು. ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಶ್ರೀನಾರಾಯಣಗುರುಗಳು ಈ ದೇಶ ಕಂಡ ಮೌನ ಕ್ರಾಂತಿಯ ಹರಿಕಾರ. ಹಿಂದುಳಿದ ವರ್ಗದ ಆತ್ಮಗೌರವವನ್ನು ಎತ್ತಿ ಹಿಡಿದ ಪುಣ್ಯಾತ್ಮ. ಅಂತವರ ಆದರ್ಶಗಳನ್ನು ಕೂಡ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂತಾಗಬೇಕು ಎಂದರು.
ನಿವೃತ್ತ ಕಾರ್ಯಾಲಯ ಸಹಾಯಕ ಡಿ.ಜಿ.ನಾಯ್ಕ, ಈ ಹಿಂದೆ ನಾಮಧಾರಿ ಸಮಾಜದಲ್ಲಿ ಪ್ರತಿಭಾ ಪುರಸ್ಕಾರಗಳು ನಡೆಯುತ್ತಿದ್ದು, ಆದರೆ ಕೆಲ ಕಾರಣಗಳಿಂದ ಸ್ಥಗಿತಗೊಂಡಿತ್ತು. ಈಗ ಶ್ರೀ ನಾರಾಯಣಗುರು ವೇದಿಕೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿವರ್ಷ ಇದನ್ನು ಮುಂದುವರಿಸಿಕೊಂಡು ಹೋಗುವಂತಾಗಬೇಕು ಎಂದರು.
ಶ್ರೀ ನಾರಾಯಣಗುರು ವೇದಿಕೆ ಕಾರ್ಯದರ್ಶಿ ಮಂಜುನಾಥ ಕೆ.ನಾಯ್ಕ ಸ್ವಾಗತಿಸಿದರು. ಅಧ್ಯಕ್ಷ ನಾಗರಾಜ ಎಚ್.ನಾಯ್ಕ ನಿರ್ವಹಿಸಿದರು. ವಕೀಲ ಉಮೇಶ ಎನ್.ನಾಯ್ಕ ವಂದಿಸಿದರು.
ಪ್ರತಿಭಾ ಪುರಸ್ಕಾರ; ಎಸ್.ಎಸ್.ಎಲ್.ಸಿ. ವಿಭಾಗದಲ್ಲಿ ರಕ್ಷಿತಾ ನಾಯ್ಕ, ದೇವರಾಜ ನಾಯ್ಕ, ಪ್ರಣಾಮ ನಾಯ್ಕ, ಪಿಯುಸಿ ವಿಭಾಗದಲ್ಲಿ ಅನನ್ಯಾ ನಾಯ್ಕ, ಸಂಪತ್ ನಾಯ್ಕ, ನಿಖಿಲ ನಾಯ್ಕ, ಪದವಿ ವಿಭಾಗದಲ್ಲಿ ಸ್ನೇಹಲ್ ನಾಯ್ಕ, ಶರತ ವಿ.ನಾಯ್ಕ, ರೇಷ್ಮಾ ನಾಯ್ಕ, ಸೂರಜ ನಾಯ್ಕ ಬಹುಮಾನ ಪಡೆದರು. ಸ್ನೇಹಲ್ ನಾಯ್ಕ, ಸೂರಜ ನಾಯ್ಕ, ಪ್ರಕಾಶ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು.