ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಸ್ಥಗಿತಗೊಂಡಿದ್ದ ಜಲ ಕ್ರೀಡೆ ಮತ್ತು ರಾಫ್ಟಿಂಗ್ ಮತ್ತೆ ಆರಂಭವಾಗಿದ್ದು, ಸದ್ಯ ಪ್ರವಾಸಿಗರಿಗೆ ಮತ್ತು ಇಲ್ಲಿನ ಸ್ಥಳೀಯ ಕೆಲಸಗಾರರಿಗೆ ಅನುಕೂಲವಾಗಿದೆ.
ಗಣೇಶಗುಡಿಯಲ್ಲಿ ರಾಫ್ಟಿಂಗ್ ಆರಂಭವಾದ ಸುದ್ದಿ ಕೇಳಿ ಈಗಾಗಲೇ ಬಹಳಷ್ಟು ಪ್ರವಾಸಿಗರು ರಾಫ್ಟಿಂಗ್ ಮಾಡಲು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ತಾತ್ಕಾಲಿಕವಾಗಿ ಮತ್ತೆ ರಾಫ್ಟಿಂಗ್ ನಡೆಸಲು ಅನುಮತಿ ನೀಡಿದ ಕಾರಣ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಂತಾಗಿದೆ.
ಆರು ರಾಫ್ಟಿಂಗ್ ಮಾಲಿಕರಿಗೆ ಈಗ ಪ್ರವಾಸೋದ್ಯಮ ಇಲಾಖೆ ಶಾರ್ಟ್ ರಾಫ್ಟಿಂಗ್ ನಡೆಸಲು ತಾತ್ಕಾಲಿಕ ಅವಕಾಶ ನೀಡಿದ್ದು ಪ್ರವಾಸಿಗರು ಸಧ್ಯ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಾಫ್ಟಿಂಗ್ ಮಾಡುವಾಗ ರಾಫ್ಟಿಂಗ್ ಬೋಟ್ ಮಗುಚಿ ಬಿದ್ದು ಅವಘಡ ಉಂಟಾಗಿತ್ತು, ಈ ಕಾರಣದಿಂದ ಜಿಲ್ಲಾಧಿಕಾರಿಗಳು ಶಾರ್ಟ್ ರಾಫ್ಟಿಂಗ್ ಬಂದ್ ಮಾಡಿಸಿದ್ದರು. ಗಣೇಶಗುಡಿಯಲ್ಲಿ ರಾಫ್ಟಿಂಗ್ ಬಂದ್ ಆದ ಕಾರಣ ಜೋಯಿಡಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿತ್ತು, ಪ್ರವಾಸಿಗರು ಮತ್ತು ಪ್ರವಾಸೋದ್ಯಮ ನಂಬಿ ಬದುಕುವ ಕೆಲಸಗಾರರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದರು.
ಆದರೆ ಜೊಯಿಡಾ ತಾಲೂಕಿನ ಪ್ರವಾಸೋದ್ಯಮ ಬೆಳೆಯಲು ರಾಫ್ಟಿಂಗ್ ಬಹುಮುಖ್ಯ ಕಾರಣವಾಗಿದ್ದು ಸದ್ಯ ಪ್ರವಾಸೋದ್ಯಮ ಇಲಾಖೆ ರಾಫ್ಟಿಂಗ್ ಮಾಡಲು ಅನುಮತಿ ನೀಡಿದ್ದರಿಂದ ತಾಲೂಕಿನ ಪ್ರವಾಸೋದ್ಯಮಿಗಳಿಗೆ ಮತ್ತು ಇಲ್ಲಿನ ಸ್ಥಳೀಯರಿಗೆ ಅನುಕೂಲವಾಗಿದೆ.