ಯಲ್ಲಾಪುರ: ಕಳೆದ ಐದಾರು ವರ್ಷಗಳ ಹಿಂದೆ ಹೊಸ ಬೆಳಕು ಯೋಜನೆಯಡಿ ರಾಜ್ಯ ಸರ್ಕಾರ ರಿಯಾಯಿತಿ ದರದಲ್ಲಿ ವಿತರಿಸಿದ್ದ ಎಲ್‍ಇಡಿ ಬಲ್ಬ್ ಗಳ ಬಾಕಿ ಉಳಿದ ಹಣವನ್ನ ಈಗ ವಸೂಲು ಮಾಡಲಾಗುತ್ತಿದ್ದು, ಗ್ರಾಹಕರ ಅರಿವಿಗೇ ಬಾರದಂತೆ ವಿದ್ಯುತ್ ಬಿಲ್‍ನಲ್ಲೇ ಬಾಕಿ ಪಾವತಿ ಸೇರಿಸಿಕೊಡಲಾಗುತ್ತಿದೆ.
ಐದಾರು ವರ್ಷಗಳ ಹಿಂದೆ ಎಲ್‍ಇಡಿ ಬಲ್ಬ್ ಗಳ ದರ 300- 500 ರೂ. ಇತ್ತು. ಈ ಕಾರಣದಿಂದ ಅಂದಿನ ರಾಜ್ಯ ಸರ್ಕಾರ ರಿಯಾಯಿತಿ ದರದಲ್ಲಿ ವಿದ್ಯುತ್ ಗ್ರಾಹಕರಿಗೆ ಈ ಬಲ್ಬ್ ಗಳನ್ನು ಒದಗಿಸಲು ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ (ಇಇಎಸ್‍ಎಲ್) ಏಜೆನ್ಸಿಯೊಂದರ ಮೂಲಕ ಯೋಜನೆಯೊಂದನ್ನು ಪ್ರಾರಂಭಿಸಿ, ಅದಕ್ಕೆ ಹೊಸ ಬೆಳಕು ಎಂದು ಹೆಸರಿಟ್ಟಿತ್ತು. ಈ ಯೋಜನೆಯಡಿ ಎಲ್ಲಾ ತಾಲೂಕು ಕೇಂದ್ರದಲ್ಲಿನ ವಿದ್ಯುತ್ ಸರಬರಾಜು ಕಂಪನಿಗಳ ಕೌಂಟರ್‍ಗಳಲ್ಲೇ ಒಂದು ಬಿಪಿಎಲ್ ಕಾರ್ಡ್‍ಗೆ ತಲಾ 10 ಬಲ್ಬ್‍ಗಳನ್ನ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಅಂದು ಸರ್ಕಾರ ಒಂದು ಬಲ್ಬ್ ಗೆ ಅಂದಾಜು 40- 80 ರೂ.ನವರೆಗೆ ಪಡೆದಿತ್ತು.
ಗ್ರಾಹಕರಿಗೆ ಬಲ್ಬ್ ಗಳನ್ನು ವಿತರಿಸುವ ಸಂದರ್ಭದಲ್ಲಿ ಹೆಚ್ಚುವರಿ ಹಣವನ್ನು ಮುಂದಿನ ದಿನಗಳಲ್ಲಿ ವಸೂಲು ಮಾಡಲಾಗುವುದು ಎನ್ನುವ ಯಾವುದೇ ಮಾಹಿತಿಯನ್ನು ಅಂದು ನೀಡಿರಲಿಲ್ಲ. ಯಾವೊಬ್ಬ ರಾಜಕಾರಣಿಯೂ ಕೂಡ, ರಿಯಾಯತಿ ದರದಲ್ಲಿ ಬಲ್ಬ್ ವಿತರಣೆ ಮಾಡುತ್ತೇವೆ ಎಂದು ಅಂದು ಹೇಳಿರುವುದು ಬಿಟ್ಟರೆ, ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿರಲಿಲ್ಲ. ಹೀಗಾಗಿ ಕಡಿಮೆ ದರದಲ್ಲಿ, ವಿದ್ಯುತ್ ಉಳಿತಾಯ ಮಾಡುವ ಎಲ್‍ಇಡಿ ಬಲ್ಬ್‍ಗಳನ್ನು ಜನತೆ ಮುಗಿಬಿದ್ದು ಖರೀದಿಸಿದ್ದರು. ವಿದ್ಯುತ್ ಬಿಲ್ ಮತ್ತು ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ಪಡೆದು ಅಂದು ಬಲ್ಬ್ ಗಳನ್ನು ವಿತರಣೆ ಮಾಡಲಾಗಿತ್ತು.
ಸುಮಾರು ಒಂದು ವರ್ಷದ ಗ್ಯಾರಂಟಿಯೊಂದಿಗೆ ನೀಡಲಾಗಿದ್ದ ಈ ಬಲ್ಬ್ ಎರಡ್ಮೂರು ತಿಂಗಳಲ್ಲೇ ಹಾಳಾಗಿದ್ದವು. ಗ್ರಾಹಕರು ಬಲ್ಬ್ ಬದಲಾಯಿಸಲು ವಿದ್ಯುತ್ ಸರಬರಾಜು ಕಂಪನಿಗಳ ಕಚೇರಿಗೆ ತೆರಳಿದಾಗ ಅಲ್ಲಿ ಬಲ್ಬ್ ವಿತರಣೆ ಜವಾಬ್ದಾರಿ ವಹಿಸಿಕೊಂಡಿದ್ದ ಏಜೆನ್ಸಿಯವರು ಕಾಣೆಯಾಗಿದ್ದರು. ಆದರೆ ಈ ಬಲ್ಬ್‍ಗಳ ಬಾಕಿ ಹಣವನ್ನ ಕಳೆದ ಕೆಲವು ತಿಂಗಳಿಂದ ವಿದ್ಯುತ್ ಬಿಲ್‍ನಲ್ಲಿ ಸೇರಿಸಿ ಗ್ರಾಹಕರಿಗೆ ನೀಡಲಾಗುತ್ತಿದ್ದು, ಸರ್ಕಾರಗಳ ಹಿಂಬಾಗಿಲಿನ ಮೋಸವೀಗ ಜನರನ್ನ ಅಸಮಾಧಾನಗೊಳಿಸಿದೆ. ಜೊತೆಗೆ, ಸರ್ಕಾರದ ಯೋಜನೆಗಳ ಫಲಾನುಭವಿಗಳಾಗುವಾಗಲೂ ಚಿಂತಿಸಿ ಹೆಜ್ಜೆ ಇಡಬೇಕಾದ ಅನಿವಾರ್ಯತೆಯನ್ನ ಈ ಪ್ರಕರಣ ಸೃಷ್ಟಿ ಮಾಡಿದೆ.
ಕೋಟ್…
ನಾನು ಹೆಸ್ಕಾಂ ವಿದ್ಯುತ್ ಗ್ರಾಹಕ. ಐದಾರು ವರ್ಷಗಳ ಹಿಂದೆ ರಿಯಾಯಿತಿ ದರದಲ್ಲಿ ಬಲ್ಬ್‍ಗಳನ್ನ ಖರೀದಿಸಿದ್ದೆ. ಅಂದು ಬಾಕಿ ಪಾವತಿಯ ಬಗ್ಗೆ ಯಾರೂ ತಿಳಿಸಿರಲಿಲ್ಲ. ಆದರೆ ಈಗ ವಿದ್ಯುತ್ ಬಿಲ್‍ನೊಂದಿಗೆ ಪ್ರತಿ ತಿಂಗಳು ಇಎಂಐನಂತೆ ರೂ.80ನ್ನು ಸೇರಿಸಿ ನೀಡಲಾಗುತ್ತಿದೆ.–ಯಲ್ಲಾಪುರ ಪಟ್ಟಣದ ವಿದ್ಯುತ್ ಗ್ರಾಹಕ
ಅಂದು ಏಜೆನ್ಸಿಯೊಂದು ಬಲ್ಬ್ ಗಳನ್ನು ರಿಯಾಯಿತಿ ದರದಲ್ಲಿ ವಿತರಿಸುತ್ತಿತ್ತು. ಈಗ ಆ ಏಜೆನ್ಸಿಯವರು ಬರುತ್ತಿಲ್ಲ. ಆದರೆ ಬಾಕಿ ಹಣವನ್ನು ವಸೂಲು ಮಾಡಲು ಆದೇಶ ಬಂದಿರುವ ಕಾರಣ ಅದನ್ನು ವಿದ್ಯುತ್ ಬಿಲ್‍ಗಳಲ್ಲೇ ಸೇರಿಸಿ ಭರಣ ಮಾಡಿಕೊಳ್ಳಲಾಗುತ್ತಿದೆ.–ದೀಪಕ್ ಕಾಮತ್, ಹೆಸ್ಕಾಂ ಶಿರಸಿ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್