ಸಿದ್ದಾಪುರ;ತಾಲೂಕಿನ ಸರಕುಳಿ ಗ್ರಾಮದಲ್ಲಿರುವ ಶ್ರೀ ಜಗದಂಬಾ ಪ್ರೌಢಶಾಲೆ, ಸರಕುಳಿಯ ಹಳೇವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಮೇ.14 ರಂದು ಅದ್ಧೂರಿಯಾಗಿ ನೆರವೇರಿತು. ಶಾಲೆಯೊಂದಿಗೆ ಹಳೇವಿದ್ಯಾರ್ಥಿಗಳು ನಿರಂತರವಾಗಿ ನಿಕಟ ಸಂಪರ್ಕದಲ್ಲಿರಬೇಕೆಂಬ ಉದ್ದೇಶದಿಂದ 19 ಡಿಸೆಂಬರ್ 1971ರಂದು ಹಳೇವಿದ್ಯಾರ್ಥಿ ಸಂಘವನ್ನು ಸ್ಥಾಪಿಸಲಾಯಿತು. ಈ ಸಂಘವು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿ, ಅದರಂತೆ ಮೇ.14 ರಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಎಂ.ಎಂ.ಹೆಗಡೆಯವರು ದೀಪ ಬೆಳಗುವ ಮೂಲಕ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 1958ರಿಂದ ಇಂದಿನವರೆಗೆ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಹಾಗೂ ಪ್ರಸ್ತುತ ಮುಖ್ಯಾಧ್ಯಾಪಕರನ್ನು ಈ ಸಮಯದಲ್ಲಿ ಸನ್ಮಾನಿಸಲಾಯಿತು. ಈವರೆಗೆ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುರುವಂದನೆ ಸ್ವೀಕರಿಸಿದ ಉದ್ಘಾಟಕರಾದ ಎಂ.ಎಂ.ಹೆಗಡೆ ಮಾತನಾಡಿ, ಹಳೇವಿದ್ಯಾರ್ಥಿ ಸಂಘವು ಆರಂಭವಾದ ಹಿನ್ನಲೆ, ಸಂಘವು ಪ್ರೌಢಶಾಲೆಯೊಂದಿಗೆ ಹಾಗೂ ಹಳೇ ವಿದ್ಯಾರ್ಥಿಗಳೊಂದಿಗೆ ಹೊಂದಿರುವ ಸಂಬಂಧವನ್ನು ವಿವರಿಸಿದರು. ಸರಕುಳಿ ಶಿಕ್ಷಣ ಸಮಿತಿಯ ಹಾಗೂ ಹಳೇವಿದ್ಯಾರ್ಥಿ ಸಂಘದ ಈಗಿನ ಅಧ್ಯಕ್ಷರೂ ಆಗಿರುವ ಮಂಜುನಾಥ ಹೆಗಡೆ, ತ್ಯಾರಗಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಲ್ಲದೇ,ಈ ಸಮಯದಲ್ಲಿ ಶ್ರೀ ಜಗದಂಬಾ ಪ್ರೌಢಶಾಲೆಯ ಅಧಿಕೃತ ಜಾಲತಾಣ (ವೆಬ್ ಸೈಟ್)ಕ್ಕೆ ಚಾಲನೆ ನೀಡಲಾಯಿತು. ಹಳೇ ವಿದ್ಯಾರ್ಥಿಗಳು ಹಾಗೂ ಊರನಾಗರಿಕರು ಶೈಕ್ಷಣಿಕ, ಸಾಮಾಜಿಕ, ಕ್ರೀಡೆ, ಕೃಷಿ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ತನ್ನದೇ ಆದ ಜನಪರ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ವಿವರಿಸಿದರು.
ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಕೃಷ್ಣಮೂರ್ತಿ ಎಚ್ ಎಸ್ ಆಗಮಿಸಿದ ಎಲ್ಲಾ ಗಣ್ಯರನ್ನು ಸ್ವಾಗತಿಸಿ, ಸಂಘದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೇವಿದ್ಯಾರ್ಥಿಯಾದ ಮಹಾಬಲೇಶ್ವರ ಹೆಗಡೆ, ಹೂಡ್ಲಮನೆ ಸಂಘದ ಮತ್ತು ಶಾಲೆಯ ಸಾಧನೆಯ ವರದಿಯನ್ನು ಮಂಡಿಸಿದರು. ಶಾಲೆಯ ಶಿಕ್ಷಕರಾದ ವಿಘ್ನೇಶ್ವರ ಕೆ.ಎಸ್ ಹಾಗೂ ಶ್ರೀಮತಿ ಲತಾ ಹೆಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಳೇವಿದ್ಯಾರ್ಥಿ ಹಾಗೂ ಸರಕುಳಿ ಶಿಕ್ಷಣ ಸಮಿತಿಯ ಇಂದಿನ ಸದಸ್ಯರಾದ ಜಿ.ಎನ್.ಭಟ್ಟ ಕಿಚ್ಚಿಕೇರಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಶಾಲೆಯ ಹಳೇವಿದ್ಯಾರ್ಥಿಯಾದ ರಾಘವೆಂದ್ರ ಹೆಗಡೆ, ಕಡ್ನಮನೆ ಇವರಿಂದ ಮರಳುಕಲಾ ಪ್ರದರ್ಶನ ನಡೆಯಿತು. ಇದಕ್ಕೆ ಪೂರಕವಾಗಿ ಗಣೇಶ ದೇಸಾಯಿ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
ನಂತರದಲ್ಲಿ ನಮ್ಮ ಶಾಲೆಯ ಹಳೇವಿದ್ಯಾರ್ಥಿಗಳಾದ ಶ್ರೀಮತಿ ರೇಖಾ ಹೆಗಡೆ, ಹುಬ್ಬಳ್ಳಿ ಇವರಿಂದ ದಾಸವಾಣಿ ಕಾರ್ಯಕ್ರಮ, ಡಾ|| ಸಂಧ್ಯಾ ಭಟ್ಟ, ಹೆಗ್ಗರ್ಸಿಮನೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಂತರದಲ್ಲಿ ಯಕ್ಷನೃತ್ಯ ಹಾಗೂ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು.
ಸುವರ್ಣ ಮಹೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಲು ಸಹಕರಿಸಿದ ಎಲ್ಲಾ ಹಳೇವಿದ್ಯಾರ್ಥಿಗಳು, ಅಧ್ಯಕ್ಷರು/ಸದಸ್ಯರು- ಶ್ರೀ ಗ್ರಾಮದೇವತೆ ಯುವಕ ಸಂಘ, ಸರಕುಳಿ-ಕೆರೆಗದ್ದೆ ಮತ್ತು ಶ್ರೀ ವಿಘ್ನೇಶ್ವರ ಯುವಕ ಸಂಘ, ಉಂಬಳಮನೆ-ಬಿದ್ರಮನೆ; ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಊರ ಮಹನೀಯರಿಗೆ ಹಳೇವಿದ್ಯಾರ್ಥಿ ಸಂಘವು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದೆ.