ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಆರಾಧ್ಯ ದೇವರಾದ ಲಕ್ಷ್ಮೀ ನೃಸಿಂಹ ದೇವರ ರಥೋತ್ಸವ ಸೇವೆಯು ನೃಸಿಂಹ ಜಯಂತಿ ಶನಿವಾರದಂದು ರಾತ್ರಿ ಸಂಭ್ರಮ ಸಡಗರದಿಂದ ನಡೆಯಿತು.
ರಾತ್ರಿ 11.30 ಕ್ಕೆ ದೇವರ ಪಲ್ಲಕ್ಕಿಯು ಮಠದಿಂದ ಹೊರಟು 12 ಗಂಟೆ ಒಳಗೆ ತೇರುಬೀದಿಯಲ್ಲಿ ಸಿಂಗಾರಗೊಂಡ ರಥದಲ್ಲಿ ಶ್ರೀದೇವರನ್ನು ರಥಾರೂಢಗೊಳಿಸಲಾಯಿತು.
ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಬಳಿಕ ರಥೋತ್ಸವ, ಮದ್ದು ಗುಂಡುಗಳ ಸೇವೆಗಳು ನಡೆದವು. ರವಿವಾರ ಬೆಳಗಿನ ಜಾವ ದೇವರು ಮಠಕ್ಕೆ ವಾಪಸ್ಸಾದ ನಂತರ ಅಷ್ಟಾವಧಾನ ಸೇವೆಗಳು ನಡೆದವು.
ರಥದ ನಿರ್ಮಾಣ ಹಾಗೂ ರಥೋತ್ಸವದಲ್ಲಿ ರಥದ ಗಾಲಿ ನಿರ್ವಹಣೆಯನ್ನು ಮುಸ್ಲಿಂ ಸಮುದಾಯದವರು ತಲ ತಲಾಂತರದಿಂದ ನಡೆಸಿಕೊಂಡು ಬಂದರೆ, ಸಿಡಿಮದ್ದು ಪ್ರದರ್ಶನವನ್ನು ಕ್ರೈಸ್ತ ಕುಟುಂಬದ ವ್ಯಕ್ತಿ ನಿರ್ವಹಿಸುವದರಿಂದ ಈ ರಥೋತ್ಸವ ಭಾವೈಕ್ಯದ ರಥೋತ್ಸವ ಎಂದೇ ಹೆಸರಾಗಿದೆ.
ರಥೋತ್ಸವದ ಬಳಿಕ ರಾತ್ರಿ ಯಕ್ಷ ಶಾಲ್ಮಲಾ ನೇತೃತ್ವದಲ್ಲಿ ರಾಜಾ ರುದ್ರಕೋಪ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಶಂಕರ ಬ್ರಹ್ಮೂರು, ಸತೀಶ ದಂಟಕಲ, ನರಸಿಂಹ ಹಂಡ್ರಮನೆ, ವಿಘ್ನೇಶ್ವರ ಗೌಡ ಹಿಮ್ಮೇಳದಲ್ಲಿ, ಅಶೋಕ ಭಟ್ಟ ಸಿದ್ದಾಪುರ, ಭಾಸ್ಕರ
ಗಾಂವಕರ, ನಾಗೇಂದ್ರ ಮೂರೂರು, ಸದಾಶಿವ ಮಲವಳ್ಳಿ, ಪ್ರವೀಣ ತಟ್ಟಿಸರ, ವೆಂಕಟೇಶ ಬೊಗ್ರಿಮಕ್ಕಿ, ನಾಗರಾಜ್ ಜೋಶಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು.