ಶಿರಸಿ: ಜಾತ್ರೆ ಸಂದರ್ಭದಲ್ಲಿ ಅಂಗಡಿಗಳನ್ನು ಬಿಟ್ಟುಕೊಟ್ಟು ಆತಂಕದಲ್ಲಿದ್ದ ಕೋಣನ ಬಿಡಕಿಯ ಅಂಗಡಿಕಾರರಿಗೆ ಜಾಗ ಮಾರ್ಕ್ ಮಾಡಿ ನೀಡಲಾಗುವುದೆಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅಂಗಡಿಕಾರರಿಗೆ ಭರವಸೆ ನೀಡಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಕೊಣನ ಬಿಡಕಿಯಲ್ಲಿರುವ 90 ಅಂಗಡಿಕಾರರು ಜಾತ್ರೆ ಸಮಯದಲ್ಲಿ ಅಂಗಡಿಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ ಕೊಣನ ಬಿಡಕಿ ಜಾಗವನ್ನು ಹೊಸ ಬಸ್ ನಿಲ್ದಾಣದ ಕಟ್ಟಲು ನಗರಸಭೆ ಒಪ್ಪಿಗೆ ಸೂಚಿಸಿರುವುದರಿಂದ ಸಹಜವಾಗಿಯೇ ಅಂಗಡಿಕಾರರಲ್ಲಿ ಆತಂಕ ಉಂಟಾಗಿತ್ತು. ಈ ನಡುವೆ ಅಂಗಡಿಕಾರರ ಒತ್ತಾಯಕ್ಕೆ ಮಣಿದಿದ್ದ ನಗರಸಭೆಯವರು ಕೋಣನ ಬಿಡಕಿ ಗಟಾರದ ಹತ್ತಿರದಿಂದಲೇ ಜಾಗ ನೀಡಲು ಎರಡು ವಾರದ ಹಿಂದೆ ಮಾರ್ಕ್ ಮಾಡಲಾಗಿತ್ತು.
ಆದರೆ ಮಳೆ ಬಂದು ಮಾರ್ಕ್ ಅಳಿಸಿ ಹೋಗಿದ್ದರೂ ನಗರಸಭೆಯಿಂದ ಜಾಗ ನೀಡುವ ಬಗ್ಗೆ ಯಾವುದೇ ಮುತುರ್ವಜಿವಹಿಸಿರಲಿಲ್ಲ. ಅಂಗಡಿಕಾರರು ಮಾತ್ರ ದಿನಾ ಬೆಳಿಗ್ಗೆ ಎದ್ದು ಕೊಣನ ಬಿಡಕಿಗೆ ಹೋಗುವುದು ಬರುವುದು ಮಾಡುತ್ತಿದ್ದರೂ ಯಾವುದೇ ಪ್ರಗತಿ ಮಾತ್ರ ನಗರಸಭೆಯಿಂದ ಕಂಡು ಬರಲಿಲ್ಲವಾಗಿತ್ತು. ಶನಿವಾರ ಬೆಳಿಗ್ಗೆ ಅಂಗಡಿಕಾರರೆಲ್ಲ ಸೇರಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕರವರಿಗೆ ಮತ್ತೆ ಆಗ್ರಹ ಮಾಡಿದ್ದರಿಂದ ಅವರು ಜಾಗದಲ್ಲಿದ್ದ ಅಂಗಡಿ ಜಾಗಕ್ಕೆ ಮಾರ್ಕ್ ಮಾಡಿ ನೀಡಲು ಮುಂದಾಗಿದ್ದಾರೆ.