ಕಾರವಾರ:ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಐ.ಆರ್.ಬಿ ಕಾರ್ಯನಿರ್ವಾಹಕ ವ್ಯವಸ್ಥಾಪಕರಿಗೆ ಹಾಗೂ ಎನ್‍ಎಚ್‍ಎಐ ಅಧಿಕಾರಿಗಳೊಂದಿಗೆ ಕಾಮಗಾರಿಯನ್ನು ಶಾಸಕಿ ರೂಪಾಲಿ ಎಸ್.ನಾಯ್ಕ ಶನಿವಾರ ಪರಿಶೀಲಿಸಿ ಮಾತನಾಡಿದರು.
ಮಳೆಗಾಲ ಪೂರ್ವದಲ್ಲಿ ಚರಂಡಿ ಹಾಗೂ ನೀರು ಹೋಗುವ ಮಾರ್ಗದಲ್ಲಿ ಹಾಕಲಾದ ಕಲ್ಲು ಮತ್ತು ಮಣ್ಣನ್ನು ತೆರವುಗೊಳಿಸಿ ಮುಂಬರುವ ಸಮಸ್ಯೆ ನಿವಾರಿಸುವಂತೆ ಐ.ಆರ್.ಬಿ ಕಾರ್ಯನಿರ್ವಾಹಕ ವ್ಯವಸ್ಥಾಪಕರಿಗೆ ಹಾಗೂ ಎನ್‍ಎಚ್‍ಎಐ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ಬಾರಿ ಕಾಮಗಾರಿಯಿಂದ ನನ್ನ ಕ್ಷೇತ್ರದ ಜನರು ಕೃತಕ ಪ್ರವಾಹದಿಂದ ಸಮಸ್ಯೆಯನ್ನು ಎದುರಿಸಿದ್ದಾರೆ. ಇದು ಈ ಬಾರಿ ಮರುಕಳಿಸಬಾರದು ಮಳೆಗಾಲ ಆರಂಭವಾಗುವ ಪೂರ್ವದಲ್ಲಿಯೇ ಚರಂಡಿ ಸ್ವಚ್ಛಪಡಿಸುವುದು, ಚರಂಡಿ ನಿರ್ಮಿಸುವುದು, ಸರಾಗವಾಗಿ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಹೆದ್ದಾರಿ ನಿರ್ಮಾಣಕ್ಕೆ ಕ್ಷೇತ್ರದ ಜನತೆ ಇದುವರೆಗೆ ಕ್ಷೇತ್ರದಲ್ಲಿ ಯಾರೋಬ್ಬರೂ ಮಾತನಾಡಿಲ್ಲ. ಇಲ್ಲಿಯ ಜನರು ಮುಗ್ದರೆಂದು ಸುಮ್ಮನಿದ್ದಾರೆ. ಈಗ ಸಹಿಸುವುದಿಲ್ಲ. ತ್ವರಿತವಾಗಿ ಸಮಸ್ಯೆ ನಿವಾರಣೆಯಾಗಲೇ ಬೇಕು. ಆಗಸ್ಟ್ ತಿಂಗಳ ಒಳಗಾಗಿ ಕಾರವಾರ- ಅಂಕೋಲಾ ತಾಲ್ಲೂಕಿನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಎಚ್ಚರಿಸಿದರು.
ಕಾರವಾರ ತಾಲ್ಲೂಕಿನ ಮಾಜಾಳಿ ದೇವತಿ ದೇವಸ್ಥಾನ ಹತ್ತಿರ ರಸ್ತೆಯ ಮೇಲೆ ನೀರು ಹರಿದು ಬರುತ್ತಿದೆ. ಕಾರವಾರ ವ್ಯಾಪ್ತಿಯ ಖಾಪ್ರಿ ದೇವಸ್ಥಾನ ಪಕ್ಕದಲ್ಲಿ ಪಿಚ್ಚಿಂಗ್ ಮತ್ತು ಚರಂಡಿ ನಿರ್ಮಾಣ, ಹೆದ್ದಾರಿಯ ಫ್ಲೈ ಓವರ್ ನಿಂದ ನಗರಕ್ಕೆ ಪ್ರವೇಶ, ಟನಲ್, ಬಿಣಗಾ, ಅರ್ಗಾ, ಚೆಂಡಿಯಾ ವ್ಯಾಪ್ತಿಯಲ್ಲಿ ಮಳೆ ನೀರಿನಿಂದ ಕೃತಕ ಪ್ರವಾಹ ಉಂಟಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು. ಪ್ರವಾಹವನ್ನು ತಪ್ಪಿಸುವುದಕ್ಕಾಗಿ ಕೈಗೊಳ್ಳಬೇಕಾದ ಕ್ರಮಕೈಗೊಂಡು ತ್ವರಿತವಾಗಿ ಅನುಷ್ಠಾನ ಮಾಡಿ ಸಮಸ್ಯೆ ನಿವಾರಿಸುವಂತೆ ಸೂಚನೆ ನೀಡಿದರು.
ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಮನೆಗಳಿಗೆ ಗುಡ್ಡದ ನೀರು ನಿಂತು ಸಮಸ್ಯೆಯಾಗುತ್ತಿದೆ. ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು. ಅವರ್ಸಾದಲ್ಲಿ ಮನೆಯ ಪಕ್ಕದಲ್ಲಿಯೇ ಹೆದ್ದಾರಿ ಹಾದುಹೋಗಿದೆ. ಈವರೆಗೂ ಅವರಿಗೆ ಪರಿಹಾರ ಸಿಕ್ಕಿಲ್ಲ ಇದರ ಬಗ್ಗೆಯೂ ಗಮನಹರಿಸಬೇಕು ಎಂದು ಎನ್‍ಎಚ್‍ಎಐ ಅಧಿಕಾರಿಗಳಿಗೆ ಸೂಚಿಸಿದರು.
ಅಂಕೋಲಾ ನಗರ ಪ್ರವೇಶದ ಅಂಬೇಡ್ಕರ್ ವೃತ್ತದಿಂದ ನಗರಕ್ಕೆ ಪ್ರವೇಶದ ಕುರಿತು ಜನರಿಗೆ ಮಾಹಿತಿ ನೀಡಬೇಕು. ಇಲ್ಲಿ ವಾಹನಸವಾರರಿಗೆ ಗೊಂದಲ ಉಂಟಾಗಿ ಅಪಘಾತಗಳಾಗುತ್ತಿವೆ. ಅಲ್ಲದೇ, ಜೆ.ಸಿ. ಕಾಲೇಜು ಹತ್ತಿರ ಫ್ಲೈಓವರ್ ಪಕ್ಕದಲ್ಲಿ ಚರಂಡಿಗಳು ಮುಚ್ಚಲಾಗಿದೆ. ಹಾಗೂ ಅಂಚಿನಲ್ಲಿ ರಸ್ತೆಯಲ್ಲಿ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ. ಇಲ್ಲಿಯ ಹಿರಿಯ ನಾಗರಿಕರಿಗೆ ತೊಂದರೆಯುಂಟಾಗುತ್ತಿದೆ. ಇದನ್ನು ಮುತುವರ್ಜಿಯಿಂದ ನಿವಾರಣೆ ಮಾಡಬೇಕು ಎಂದು ಸೂಚಿಸಿದರು.