ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ಹೈಸ್ಕೂಲ್ ಹತ್ತಿರದ ಗದ್ದೆಯೊಂದರಲ್ಲಿ ವಾಮಾಚಾರ ಮಾಡಿ ಕೆಂಪು ಬಟ್ಟೆ ಸುತ್ತಿದ ತೆಂಗಿನಕಾಯಿಗಳು, ಕುಂಕುಮ, ಅಂಗಾರ ಒಗೆದು ಹೋಗಿರುವುದು ಶನಿವಾರ ಬೆಳಕಿಗೆ ಬಂದಿದೆ.
ಗ್ರಾಮದ ಮರಾಠಿ ಓಣಿಯ ನಿವಾಸಿ, ವಿಧವೆ ಸರೋಜ ಬನ್ಸೋಡೆ ಎಂಬ ಕೃಷಿಕ ಮಹಿಳೆಯ ಗದ್ದೆಯಲ್ಲಿ ವಾಮಾಚಾರ ಮಾಡಲಾಗಿದೆ. ಈ ಕೆಂಪು ಬಟ್ಟೆ ಸುತ್ತಿದ ತೆಂಗಿನಕಾಯಿಗಳು, ಕುಂಕುಮ, ಅಂಗಾರ ಒಗೆದು ಹೋಗಿರುವುದು ನೋಡಿದರೆ ಅಮಾನುಷ ಗುಣವುಳ್ಳ ಯಾರೋ ವ್ಯಕ್ತಿಗಳು ಮಾಟ ಮಾಡಿ ಗದ್ದೆಯ ಮಾಲಿಕರಿಗೆ ಹೆದರಿಕೆ ಹುಟ್ಟಿಸಿ, ಆ ಗದ್ದೆಯನ್ನು ತಾವು ಕಬಳಿಸಲಿಕ್ಕೊ ಇಲ್ಲವೆ ಹಳೆಯ ವೈಷಮ್ಯದಿಂದಲೊ ಈ ಕೃತ್ಯ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.