ಕುಮಟಾ: ಪಟ್ಟಣದ ಬಸ್ ನಿಲ್ದಾಣಕ್ಕೆ ಶಾಸಕ ದಿನಕರ ಶೆಟ್ಟಿ ದಿಢೀರ್ ಭೇಟಿ ನೀಡಿ ಸ್ವಚ್ಛತಾ ಪರಿಶೀಲನೆ ಮಾಡಿದರು. ಈ ವೇಳೆ ಬಸ್ ನಿಲ್ದಾಣದ ಒಳಾಂಗಣ ಹಾಗೂ ಆವಾರದಲ್ಲೆಡೆ ಕಸ, ಪ್ಲಾಸ್ಟಿಕ್ ರಾಶಿ ತುಂಬಿದ್ದನ್ನು ಗಮನಿಸಿ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಶೌಚಾಲಯ ಹಾಗೂ ಸ್ವಚ್ಛತಾ ನಿರ್ವಹಣೆಯ ಗುತ್ತಿಗೆ ಪಡೆದು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕುರಿತು ಪ್ರಶ್ನಿಸಿ,ಖುದ್ದಾಗಿ ಮುತುವರ್ಜಿ ವಹಿಸಿ ಸ್ವಚ್ಛ ಮಾಡಿಸಿದರು.
ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದ್ವಿಚಕ್ರ ವಾಹನಗಳ ನಿಲುಗಡೆ ಕೂಡ ಅಸ್ತವ್ಯಸ್ತಗೊಂಡಿದ್ದು, ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿದ್ದಾರೆ. ನಿಲ್ದಾಣದ ಮುಖ್ಯದ್ವಾರದಲ್ಲೇ ನಿಲ್ಲಿಸಿ ಹೋಗುವವರ ವಾಹನಗಳನ್ನು ಲಾಕ್ ಮಾಡಿ ಠಾಣೆಗೆ ಒಯ್ಯಲು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದರು.
ತಾಲೂಕಿನಲ್ಲಿ ಪ್ರವಾಸಿ ತಾಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹಾಗಾಗಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತೀ ಅವಶ್ಯವಾಗಿದ್ದು, ಈ ಬಗ್ಗೆ ಸಾರಿಗೆ ಘಟಕದ ಜಿಲ್ಲಾಧಿಕಾರಿ ಹಾಗೂ ಡಿಪೋ ವ್ಯವಸ್ಥಾಪಕರು ಆದ್ಯತೆ ನೀಡಿ ನಿಗಾ ವಹಿಸಿ ಕೆಲಸ ನಿರ್ವಹಿಸಲು ತಿಳಿಸಿದರು.