ಯಲ್ಲಾಪುರ; ತಾಲೂಕಿನ ನಂದೋಳ್ಳಿ ಅಣಲಗಾರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯ ಅಭಿವೃದ್ದಿಯನ್ನು ಕೂಡಲೇ ಮಾಡಬೇಕೆಂದು ಬಿಜೆಪಿ ಮುಖಂಡ ಲಕ್ಷ್ಮೀನಾರಾಯಣ ಭಟ್ಟ ತೋಟ್ಮನೆ ಆಗ್ರಹಿಸಿದ್ದಾರೆ.
ಅವರು ಈ ಕುರಿತು ಶನಿವಾರ ಹೇಳಿಕೆ ನೀಡಿ,”ಕಳೆದ ಎಳೆಂಟು ವರ್ಷಗಳಿಂದ ಸದ್ರಿ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿದೆ.ಸ್ಥಳಿಯರು ಓಡಾಡಲು ಪರದಾಡುವಂತಾಗಿದೆ.ಆಗಾಗ ಕಾಟಾಚಾರಕ್ಕೆ ರಸ್ತೆ ಪ್ಯಾಚ್ ವರ್ಕ ಮಾಡಲಾಗುತ್ತಿದೆ.ಇಷ್ಟಾಗಿಯೂ ಬೇಸಿಗೆಯಲ್ಲಿ ಧೂಳು ಮಳೆಗಾಲದಲ್ಲಿ ಹೊಂಡದಲ್ಲಿ ಸರ್ಕಸ್ ಮಾಡುತ್ತ ಜನ ಓಡಾಡಬೇಕಿದೆ.ಅಣಲಗಾರ ಪುರಾತನ ಧಾರ್ಮಿಕ ಕ್ಷೇತ್ರವಾಗಿದೆ. ದೇವರ ದರ್ಶನಕ್ಕೆಂದೇ ದೂರ ದೂರದ ಊರುಗಳಿಂದ ಜನ ಆಗಮಿಸುತ್ತಾರೆ.ಆದರೆ ಹದಗೆಟ್ಟ ರಸ್ತೆಯನ್ನು ಕಂಡು ಹಿಡಿಶಾಪ ಹಾಕುವಂತಾಗಿದೆ.ಕಾರಣ ಸದ್ರಿ ರಸ್ತೆಯನ್ನು ಕೂಡಲೇ ನವೀಕರಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿಯೇ ಸಚಿವರಿದ್ದು,ಸಚಿವ ಶಿವರಾಮ ಹೆಬ್ಬಾರ ಅವರ ಪ್ರಯತ್ನದಿಂದಾಗಿ ,ದೇಹಳ್ಳಿ ಬಳಗಾರ ರಸ್ತೆ ಹಾಗೂ ದೋಣಗಾರ ಬಳಗಾರ ರಸ್ತೆ ಸೇರಿ ಸುಮಾರು ಎಂಟು ಕೋಟಿ ರೂನಲ್ಲಿ ಅಭಿವೃದ್ದಿ ಆಗುತ್ತಿರುವುದು ಸಂತಸಕರ.ಇದೇ ರೀತಿ ನಂದೊಳ್ಳಿ ಅಣಗಾರ ರಸ್ತೆಯ ಅಭಿವೃದ್ದಿಗೂ ಸಚಿವರು ಗಮನಹರಿಸಿ ತಾಲೂಕಿನ ಸರ್ವಾಂಗೀಣ ಬೆಳವಣಿಗೆಗೆ ಮುನ್ನುಡಿ ಬರೆಯಬೇಕೆಂದು ಅವರು ಒತ್ತಾಯಿಸಿದ್ದಾರೆ