ಶಿರಸಿ: ಕೆ.ಬಿ.ಆರ್. ಡ್ರಾಮಾ ಕಂಪನಿ ಹೆಸರಿನಲ್ಲಿ ಚಿಂದೋಡಿ ಕುಟುಂಬವು ವೃತ್ತಿ ರಂಗಭೂಮಿಯ ಇತಿಹಾಸದಲ್ಲಿ ಒಂದು ದಂತಕಥೆಯಾಗಿದೆ. ಈ ಕುಟುಂಬವು ಕಲೆಗೆ ಮತ್ತು ಕಲಾಸೇವೆಗೆ ಮಾಡಿರುವ ಸಾಧನೆ ನಾಡಿಗೆ ಚಿರಪರಿಚಿತ. ಈಗ ಚಿಂದೋಡಿ ಕುಟುಂಬದವರು ಒಟ್ಟುಗೂಡಿ, 1928 ರಲ್ಲಿ ಸ್ಥಾಪಿತಗೊಂಡು ಶತಮಾನದಂಚಿನಲ್ಲಿರುವ ಕೆ. ಬಿ. ಆರ್. ಡ್ರಾಮಾ ಕಂಪನಿ ದಾವಣಗೆರೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಮತ್ತು ಇತರೆ ರಂಗಭೂಮಿ ಸಂಸ್ಥೆಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಕಲಾವಿದ, ಕಲಾವಿದೆಯರನ್ನು ಗೌರವ ಸಮರ್ಪಣೆ ಮಾಡುವ ಒಂದು ಹಂಬಲ ಹಾಗೂ ಸೇವೆ ಪಾರಂಪರಿಕವಾಗಿ ನಡೆದು ಬಂದಿದೆ. ಅದರಂತೆ ಮೇ 15 ರಂದು ಬೆಳಿಗ್ಗೆ 11.30 ಕ್ಕೆ ಶಿರಸಿಯ ಹೆಚ್.ಕೆ.ಎಚ್. ಜಾಗದಲ್ಲಿ ಹಾಕಿರುವ ಕೆ.ಬಿ.ಆರ್. ಡ್ರಾಮಾ ಕಂಪನಿಯ ಆವಾರದಲ್ಲಿ ನಡೆಯಲಿದೆ.
ನಟರತ್ನ, ರಂಗಭೂಮಿ ಭೀಷ್ಮ ಚಿಂದೋಡಿ ವೀರಪ್ಪನವರ ಮತ್ತು ಪದ್ಮಶ್ರೀ ಚಿಂದೋಡಿ ಲೀಲಾರವರ ದತ್ತಿ ಪ್ರಶಸ್ತಿಯು ಪ್ರತಿವರ್ಷ ಕರ್ನಾಟಕ ನಾಟಕ ಅಕಾಡೆಮಿಯಿಂದ ಗೌರವ ಸಮರ್ಪಣೆ ಮಾಡಲಾಗುತ್ತಿದೆ. ಈಗ ಏಳು ವರ್ಷಗಳ ಹಿಂದೆ ಹಿರಿಯ ರಂಗಭೂಮಿ ಕಲಾವಿದರು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಮ್ಮ ಚಿಂದೋಡಿ ಬಂಗಾರೇಶ್ ಇವರ ನೆನಪಿನಾರ್ಥ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
2016ರಲ್ಲಿ- ಶ್ರೀಮತಿ ತೇರೆಸಮ್ಮ ಹುಬ್ಬಳ್ಳಿ, 2017ರಲ್ಲಿ – ಶ್ರೀಮತಿ ಸುಮಿತ್ರಮ್ಮ ಕುಸುಬಿ ಹುಬ್ಬಳ್ಳಿ, 2018 ರಲ್ಲಿ- ಶ್ರೀಮತಿ ಜಿ.ವಿ ಶಾರದಮ್ಮ ಬೆಂಗಳೂರು, 2019 ರಲ್ಲಿ – ಶ್ರೀಮತಿ ವನಜಾಕ್ಷಿ ಶೆಟ್ಟಿ ಹುಬ್ಬಳ್ಳಿ ಇವರುಗಳಿಗೆ ಗೌರವ ಸಮರ್ಪಣೆ ಮಾಡಲಾಗಿದೆ.
ಕರೋನ ಕಾರಣದಿಂದ ಕಳೆದ ಎರಡು ವರ್ಷ ಕಾರ್ಯಕ್ರಮ ನಡೆಸಲು ಸಾಧ್ಯವಾಗದ ಕಾರಣ ಈ ಬಾರಿ ಮೂರು ಕಲಾವಿದರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ. ಈ ವರ್ಷದಿಂದ ಇನ್ನೂ ಎರಡು ಗೌರವ ಸಮರ್ಪಣೆ ಗಳು ಸೇರ್ಪಡೆಯಾಗಿವೆ. ರಂಗಭೂಮಿ ಭೀಷ್ಮ ನಟರತ್ನ ಚಿಂದೋಡಿ ವೀರಪ್ಪನವರ ನೆನಪಿನಾರ್ಥ ಒಬ್ಬ ಹಿರಿಯ ಕಲಾವಿದರಿಗೆ ಗೌರವ ಸಮರ್ಪಣೆ ಹಾಗೂ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಅಂಜನಿ ಚಿಂದೋಡಿ ಶ್ರೀಕಂಠೇಶ್ ನೆನಪಿನಾರ್ಥ ಒಬ್ಬ ಕಲಾವಿದೆಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ.
ಅದೇ ರೀತಿ ಈ ವರ್ಷ ಚಿಂದೋಡಿ ವೀರಪ್ಪನವರ ನೆನಪಿನಾರ್ಥ ಗೌರವ ಸಮರ್ಪಣೆಯನ್ನು ದಾವಣಗೆರೆ ಹಿರಿಯ ವೃತ್ತಿ ರಂಗಭೂಮಿ ಕಲಾವಿದರಾದ ಹೆಚ್ ಮೆಹಬೂಬ್ ಅಲಿ , ವೃತ್ತಿರಂಗಭೂಮಿಯ ಹಿರಿಯ ಕಲಾವಿದೆ ಅಂಜನಿ ಚಿಂದೋಡಿ ಶ್ರೀಕಂಠೇಶ್ ರವರ ನೆನಪಿನಾರ್ಥ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಾದ ಪ್ರೇಮ ಹೊಸಮನಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಸಾವಿತ್ರಮ್ಮ ಚಿಂದೋಡಿ ಬಂಗಾರೇಶ್ ಇವರ ನೆನಪಿನಾರ್ಥ 2020-21-22 ನೇ ಸಾಲಿನ ಗೌರವ ಸಮರ್ಪಣೆಯನ್ನು ಪ್ರೇಮಾ ಗುಳೇದಗುಡ್ಡ, ಹೇಮಾವತಿ ರಾಮಗೋಪಾಲ್,ಎನ್. ಶಾಂತಮ್ಮ ಗುಬ್ಬಿ ಕಂಪನಿ ಇವರಿಗೆ ನೀಡಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.