ಹೊನ್ನಾವರ: ಖಾಸಗಿ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೇ, ಖಾಸಗಿ ವ್ಯಕ್ತಿಯೋರ್ವರ ಕಸವನ್ನು ಪಟ್ಟಣ ಪಂಚಾಯತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಸುರಿಯುವಾಗ ಮಾಹಿತಿ ತಿಳಿದು ಪಟ್ಟಣ ಪಂಚಾಯತಿ ಜನಪ್ರತಿನಿಧಿಗಳು ಆಗಮಿಸಿ ತಡೆದ ಘಟನೆ ನಡೆದಿದೆ.
ಕೆಲ ತಿಂಗಳ ಹಿಂದೆ ಕುಮಟಾ ಪುರಸಭೆಯ ಕಸದ ವಾಹನದ ಮೂಲಕ ಆಗಮಿಸುವ ಕಸವನ್ನು ತಡೆದು ವಾಪಸ್ಸು ಕಳುಹಿಸಿರುವುದಲ್ಲದೇ, ಮನವಿ, ಎಚ್ಚರಿಕೆ ಮಧ್ಯೆಯೆ ಕುಮಟಾ ತಾಲೂಕಿನ ಖಾಸಗಿ ವ್ಯಕ್ತಿಗೆ ಸೇರಿದ ಕಸವನ್ನು ಕಂಟೇನರ್ ವಾಹನದ ಮೂಲಕ ತಂದು ಸುರಿಯುತ್ತಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ದಿನದಿಂದ ಈ ಕಣ್ಣಾಮುಚ್ಚಾಲೆ ನಡೆಯುತ್ತಾ ಬಂದಿರಬಹುದೆನ್ನುವ ಅನುಮಾನ ಇದೀಗ ಬಯಲಾಗಿದೆ. ಮೊದಮೊದಲು ರಾತ್ರಿ ಸಮಯದಲ್ಲಿ ಆಗಮಿಸುವ ವಾಹನ ಇದೀಗ ರಾಜಾರೋಷವಾಗಿ ಹಗಲಿನಲ್ಲೇ ತಂದು ಸುರಿಯುತ್ತಿರುವುದು ಹೊನ್ನಾವರ ಪಟ್ಟಣ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕುಮಟಾ ತಾಲೂಕಿನ ಕಸ ಹೊನ್ನಾವರಕ್ಕೆ ತರುವುದು ಯಾಕೆ? ಎನ್ನುವ ಪ್ರಶ್ನೆ ಪಟ್ಟಣ ನಿವಾಸಿಗಳು ಕೇಳುತ್ತಿದ್ದಾರೆ.
ರಾಜಕೀಯ ಹೈಡ್ರಾಮ, ಅಧಿಕಾರಿಗಳು ಭಾಗಿ ಶಂಕೆ: ಈ ಸ್ಥಳದಲ್ಲಿ ಪಟ್ಟಣದ ಹೊರತಾಗಿ ತಾಲೂಕಿನ ಇತರೆ ವ್ಯಕ್ತಿಗಳು ಕಸ ಹಾಕಲು ಅವಕಾಶವಿಲ್ಲ. ಅಲ್ಲದೇ ಈ ಹಿಂದೆಯೇ ಕುಮಟಾ ಪುರಸಭೆ ಕಸ ಹಾಕುವಾಗ ಆರಂಭದ ಎರಡು ದಿನ ಗೇಟಿಗೆ ಬೀಗ ಹಾಕಿ ಬಳಿಕ ಹೊಂದಾಣಿಕೆ ಮಾಡಿಕೊಂಡು ವಾರದಲ್ಲಿ ಮೂರು ದಿನ ಗುಟ್ಟಾಗಿ ತಂದು ಕಸ ಸುರಿಯುತ್ತಿದ್ದರು. ಈ ಬೆಳವಣಿಗೆ ಸ್ಥಳೀಯ ಶಾಸಕರು ಹಾಗೂ ಪಟ್ಟಣ ಪಂಚಾಯತಿ ಜನಪ್ರತಿನಿಧಿಗಳ ಹೊಂದಾಣಿಕೆಯಿಂದ ನಡೆಯುತ್ತಿದೆ ಎನ್ನುವ ಆರೋಪ ಆಗಲೇ ಕೇಳಿ ಬಂದಿತ್ತು. ಶುಕ್ರವಾರ ಮತ್ತೆ ಖಾಸಗಿ ವ್ಯಕ್ತಿಯೋರ್ವರು ಪಟ್ಟಣ ಪಂಚಾಯತಿ ಸಿಬ್ಬಂದಿಯೋರ್ವರಿಗೆ ಮಾಹಿತಿ ನೀಡಿ ಖಾಸಗಿ ವಾಹನದಲ್ಲಿ ಕಸ ತಂದಿದ್ದರು. ಆದರೆ ಅಧ್ಯಕ್ಷರು ಹಾಗೂ ಸದಸ್ಯರು ಆಗಮಿಸಿ ವಾಹನ ತಡೆದು ಪ್ರಶ್ನಿಸಿದಾಗ 2 ಸಾವಿರಕ್ಕೆ ಡೀಲ್ ಆಗಿರುವ ವಿಷಯ ತಿಳಿದಿದೆ. ಇದುವರೆಗೆ ಒಮ್ಮೆಯೂ ಹೊರಗಡೆಯವರು ಕಸ ಹಾಕಿದ ಬಗ್ಗೆ ರಶೀದಿ ನೀಡದೇ ಇರುವಾಗ ಈಗ ಕಸ ಹಾಕಿದ ಬಳಿಕ ನೀಡಲಾಗುತ್ತದೆ ಎನ್ನುವ ಅಧಿಕಾರಿಗಳ ಮಾತು ಹಲವು ಅನುಮಾನ ಮೂಡುತ್ತಿದೆ. ಪಟ್ಟಣ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಾದಿಯಾಗಿ ಆಯ್ಕೆಯಾದ ಸದಸ್ಯರೆ ಈ ಹಿಂದೆ ಸಭೆಯಲ್ಲಿ ಪ್ರಸ್ತಾಪಿಸಿರುವುದು ಇಂದಿನ ಬೆಳವಣೆಗೆಗೆ ಇದಕ್ಕೆ ಪುಷ್ಟಿ ನೀಡುತ್ತಿದೆ.
ಅಧಿಕಾರಿಗಳು ಜನಪ್ರತಿನಿಧಿಗಳು ಹೊಂದಾಣಿಕೆಯಿಂದಾಗಿ ವಾಹನ ಹಿಡಿದು ಕಸದ ಸಮೇತ ಮಧ್ಯಾಹ್ನದೊಳಗೆ ಪೊಲೀಸ್ ಠಾಣೆಗೆ ವಾಹನ ತಂದರೂ ಸಂಜೆಯವರೆಗೆ ದೂರು ದಾಖಲಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಸದಸ್ಯರಾದ ಸುರೇಶ ಹೊನ್ನಾವರ, ಸುಭಾಷ ಹರಿಜನ ಕಸ ಹಾಕದಂತೆ ವಾಹನ ತಡೆಯುವಲ್ಲಿ ಯಶ್ವಸಿಯಾದರೂ, ಅಧಿಕಾರಿಗಳು ದೂರು ನೀಡಲು ಹಿಂದೇಟು ಹಾಕಿರುವುದು ಈ ಪ್ರಕರಣ ಮುಚ್ಚಿ ಹೋಗಿ ಮುಂದಿನ ದಿನದಲ್ಲಿ ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ.