ಕಾರವಾರ:ಸಂವಹನ ಕೊರತೆಯಿಂದ ಸಾಮರಸ್ಯದ ಸಂಬಂಧಗಳು ನಶಿಸಿ ಹೋಗಿದೆ. ಆ ಸಂಬಂಧಗಳು ಗಟ್ಟಿಯಾಗುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ. ಈ ದಿಸೆಯಲ್ಲಿ ಕಲ್ಲೂರವರ ಕಾರ್ಯ ಮಾದರಿಯಾಗಿದೆ ಎಂದು ‘ಕರಾವಳಿ ಮುಂಜಾವು’ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ ಹೇಳಿದರು.
ಮಾನವೀಯತೆಯೇ ಮಾನವ ಮೌಲ್ಯ ಎಂಬ ಸಂದೇಶದ ಅಡಿಯಲ್ಲಿ ಕಲ್ಲೂರ ಎಜ್ಯುಕೇಶನ್ ಟ್ರಸ್ಟ್‍ನಿಂದ ರಬಿಯಾ ಪ್ಲಾಜಾದಲ್ಲಿ ಆಯೋಜಿಸಲ್ಪಟ್ಟ ಸೌಹಾರ್ದ ಸಂಗಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೆರೆದವರ ಮನವನ್ನು ಸವಿಯಾಗಿಸಿತು.
ಆರ್‍ಎಂಒ ಡಾ.ವೆಂಕಟೇಶ ಆರ್. ಮಾತನಾಡುತ್ತ, ಮನುಷ್ಯ ಪಥ ದೂರದೃಷ್ಟಿಯಿಂದ ಕೂಡಿರಬೇಕು, ದುರಾಲೋಚಯಿಂದಲ್ಲ ಎಂದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಲಯನ್ ಡಾ.ಗಿರೀಶ ಕುಚಿನಾಡ, ಮಾನವೀಯತೆಯು ಎಲ್ಲ ಧರ್ಮಗಳಿಗಿಂತ ಶ್ರೇಷ್ಠ. ಗಾಂಧೀ, ತೆರೆಸಾ, ಕಲಾಂರಂತಹ ದಾರ್ಶನಿಕರನ್ನು ಕಂಡ ನಾವುಗಳು ಅವರ ಹೆಜ್ಜೆಯತ್ತ ಸಾಗೋಣ ಎಂದರು.
ಇನ್ನೋರ್ವ ಅತಿಥಿ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಸೌಹಾರ್ದದ ನೇತಾರ ಇಬ್ರಾಹಿಂ ಕಲ್ಲೂರ ಅವರ ಸಾಮಾಜಿಕ ಕಳಕಳಿ ಸದಾ ಸ್ಮರಣೀಯ ಎಂದರು. ಇನ್ನೋರ್ವ ವಿಶೇಷ ಉಪನ್ಯಾಸಕ ಡಾ.ಸ್ಟೆನಿ ಪಿಂಟೊ, ಹಲವು ದೇವರೆಂದು ಹೇಳುವುದಕ್ಕಿಂತ ಮನಸ್ಸಿನ ದೇವರನ್ನು ಹುಡುಕಬೇಕು. ಜೊತೆಗೆ ಮನೆ ಮತ್ತು ಮನಗಳಲ್ಲಿ ಏಕತೆ ತುಂಬುವಂತಾಗಬೇಕು ಎಂದರು. ಉದ್ಯಮಿ ಎಂ.ಎ.ಕಿತ್ತೂರು, ಓಡುವ ರಕ್ತದಲ್ಲಿ, ಸುರಿಯುವ ಕಣ್ಣೀರಿನಲ್ಲಿ ಯಾವುದೇ ಜಾತಿ ಇರುವುದಿಲ್ಲ. ಜಾತಿ ಧರ್ಮಗಳನ್ನು ನಾವು ಸೃಷ್ಟಿಸಿಕೊಂಡಿದ್ದು, ಅದು ಸದುದ್ದೇಶಕ್ಕೆ ಮಾರ್ಗವಾಗಬೇಕೆಂದು ಹೇಳಿದರು.
ಇನ್ನೋರ್ವ ಅಥಿತಿ ಪ್ರೊ.ಬಿ.ಬಿ.ನಂದ್ಯಾಳ, ಜೀವನದಲ್ಲಿ ಸಂಸ್ಕಾರವಿದೆ, ಸಂಸ್ಕಾರದಲ್ಲಿ ಜೀವನವಿದೆ. ಅವೆರಡರನ್ನು ರೂಢಿಸಿಕೊಂಡಿರುವವರು ಇಬ್ರಾಹಿಂ ಕಲ್ಲೂರವರು. ಅಕ್ಷರ- ಅನ್ನ- ಆಶ್ರಯದಾತನಾಗಿರುವ ಕಲ್ಲೂರವರ ಕಾರ್ಯ ಶ್ಲಾಘನೀಯ ಎಂದರು.
ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೌಹಾರ್ದಕ್ಕೆ ಹೆಸರಾದುದ್ದೆ ಕಾರವಾರ. ಪ್ರೀತಿ, ಭ್ರಾತೃತ್ವದ ಹೊಂಗನಸಿನ ಮನಸ್ಸಿನಿಂದ ನಾವೆಲ್ಲರೂ ಬದುಕುತ್ತಿದ್ದೇವೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಸೌಹಾರ್ದ ಸಂಗಮ ಅಂಗವಾಗಿ ವೇದಿಕೆಯಲ್ಲಿ ಎಮ್‍ಟೆಕ್‍ನಲ್ಲಿ ಬಂಗಾರದ ಪದಕ ಪಡೆದ ಪ್ರತಿಭಾವಂತೆ ರುಹಿನ್ ಅಬ್ದುಲ್ ಗಣಿ ಶೇಖ್ ಅವರನ್ನು ಸನ್ಮಾನಿಸಿ, ಕಲ್ಲೂರ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜೊತೆಗೆ ಆರ್‍ಎಂಒ ಡಾ.ವೆಂಕಟೇಶ ಆರ್., ಉಪನ್ಯಾಸಕ, ರಾಣೆಬೆನ್ನೂರಿನ ಪ್ರೋ.ಬಿ.ಬಿ.ನಂದ್ಯಾಳ ಅವರನ್ನು ಕಾರ್ಯಕ್ರಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಇಮ್ತಿಯಾಜ್ ಬುಖಾರಿ, ಅಲ್ತಾಫ್ ಶೇಖ್, ಎಂಜಿನಿಯರ್ ಅನ್ವರ್ ಖಾನ್, ರಶೀದ್ ಖಾನ್, ಸಮಾಜ ಸೇವಕ ಸ್ಯಾಮಸನ್ ಡಿಸೋಜಾ, ರಾಮಾ ನಾಯ್ಕ, ಡಾ.ಎಂ.ಗೋಳಿಕಟ್ಟೆ, ಬಾಬು ಶೇಖ್, ಎಂ.ಪಿ.ಕಾಮತ್, ಅನಿರುದ್ದನ್ ಹಳದಿಪುರಕರ, ಶಶಿ ಮಾಸೂರಕರ್, ಐಶ್ವರ್ಯ ಮಾಸೂರಕರ್, ವಸಂತ್ ಬಾಂದೇಕರ್, ಎಲ್.ಎಂ.ಪ್ರಭು, ಮಹೇಂದ್ರ ನಾಯ್ಕ ಮುಂತಾದವರು ಇದ್ದರು.
ಕಲ್ಲೂರ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಇಬ್ರಾಹಿಂ ಕಲ್ಲೂರ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಗಣೇಶ ಬಿಷ್ಠಣ್ಣನವರ ನಿರೂಪಿಸಿ ವಂದಿಸಿದರು. ಬಂದಿರುವ ಎಲ್ಲ ಅಥಿತಿಗಳು, ಸಮಾನ ಮನಸ್ಕರು ಸವಿಯಾದ ಭೋಜನ ಸವಿದರು.