ಕಾರವಾರ: ತಾಲೂಕಿನ ಗಡಿಭಾಗದ ಸರ್ಕಾರಿ ಶಾಲೆಯೊಂದನ್ನ ದತ್ತು ಪಡೆದು ಮೂಲಭೂತ ಸೌಕರ್ಯ ಒದಗಿಸಿ ವಿದ್ಯಾರ್ಥಿಗಳನ್ನ ಆಕರ್ಷಿಸುವುದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಾಗಿದೆ.
ಇತ್ತೀಚಿಗೆ ವಿದ್ಯಾರ್ಥಿಗಳ ಕೊರತೆಯಿಂದ ಸಾವಿರಾರು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ. ಖಾಸಗಿ ಶಾಲೆ, ಇಂಗ್ಲಿಷ್ ಶಿಕ್ಷಣದ ಮೋಹದಿಂದ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯವೇ ಇಲ್ಲದಿರುವ ಹಿನ್ನಲೆಯಲ್ಲಿ ಪಾಲಕರು ಸರ್ಕಾರಿ ಶಾಲೆಗಳಿಗೆ ಕಳಿಸುವುದಕ್ಕೆ ಮುಂದಾಗದೇ ಶಾಲೆಗಳು ಮುಚ್ಚಲು ಕಾರಣವಾಗಿದೆ.
ರಾಜ್ಯದ ಗೋವಾ ಗಡಿ ಜಿಲ್ಲೆಯ ಕಾರವಾರದಲ್ಲೂ ಸಹ ಸಾಕಷ್ಟು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಮುಚ್ಚಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ ಎಂದು ತೋರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಕಾರವಾರದ ಗಡಿಭಾಗವಾದ ಗಾಬಿತವಾಡದಲ್ಲಿ ಸರ್ಕಾರಿ ಶಾಲೆಯೊಂದನ್ನ ದತ್ತು ತೆಗೆದುಕೊಂಡು, ಅಭಿವೃದ್ಧಪಡಿಸಲು ಮುಂದಾಗಿದೆ. ಕಾರವಾರದಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಉತ್ಸವದ ಒಂದು ಭಾಗವಾಗಿ ಸೌಕರ್ಯವಿಲ್ಲದ ಶಾಲೆಯನ್ನ ದತ್ತು ಪಡೆಯುವ ಕಾರ್ಯ ನಡೆಸಲಾಗಿದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿ ಹಲವರು ಗಾಬಿತವಾಡದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯನ್ನ ದತ್ತು ಪಡೆದರು. 1942ರಲ್ಲಿ ಪ್ರಾರಂಭವಾದ ಈ ಶಾಲೆ, ಪೋರ್ಚುಗೀಸ್ ಆಡಳಿತವನ್ನೂ ಕಂಡಿದೆ. ಶಾಲೆಯಲ್ಲಿ ಈ ಹಿಂದೆ ನೂರಕ್ಕು ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರಂತೆ. ಆದರೆ ಕಾಲಗಳುರುಳುತ್ತ ಸದ್ಯ 30 ವಿದ್ಯಾರ್ಥಿಗಳು ಮಾತ್ರ ಕಲಿಯುತ್ತಿದ್ದು, ಗಡಿ ಭಾಗದ ಶಾಲೆಯನ್ನ ಮತ್ತೆ ಮೇಲಕ್ಕೆತ್ತಿ ಖಾಸಗಿ ಶಾಲೆಗೆ ಸಮನಾಗಿ ಬೆಳೆಸಬೇಕು ಎನ್ನುವ ಉದ್ದೇಶ ಸರ್ಕಾರಿ ನೌಕರರ ಸಂಘದ್ದಾಗಿದೆ.
ಈ ನಿಟ್ಟಿನಲ್ಲಿ ದತ್ತು ಪಡೆದ ಶಾಲೆಗೆ ಮಕ್ಕಳ ಉಪಯೋಗಕ್ಕಾಗಿ ಕಟ್ಟಡ ನಿರ್ವಹಣೆ, ಶೌಚಾಲಯ, ಸ್ಮಾರ್ಟ್ ಕ್ಲಾಸ್, ಪ್ರಾಜೆಕ್ಟರ್, ಕಂಪ್ಯೂಟರ್ ಹೀಗೆ ಸುಮಾರು 5 ಲಕ್ಷ ವೆಚ್ಚದಲ್ಲಿ ಶಾಲೆ ಅಭಿವೃದ್ದಿಗೆ ಸಂಘ ಮುಂದಾಗಿದೆ. ಕನ್ನಡ ಶಾಲೆ ಉಳಿಯಬೇಕು, ಶೈಕ್ಷಣಿಕ ಗುಣ ಮಟ್ಟ ಸರ್ಕಾರಿ ಶಾಲೆಯಲ್ಲಿ ಹೆಚ್ಚಿಸಬೇಕು ಎನ್ನುವ ಸಂದೇಶ ಸರ್ಕಾರಕ್ಕೆ ಸಾರುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲು ಸಂಘ ಮುಂದಾಗಿದೆ.
ಕೇವಲ ಉತ್ತರ ಕನ್ನಡ ಮಾತ್ರವಲ್ಲದೇ ಗಡಿನಾಡು ಉತ್ಸವ ಮಾಡುವ ರಾಜ್ಯದ ಪ್ರತಿ ಗಡಿ ಜಿಲ್ಲೆಯಲ್ಲೂ ಸರ್ಕಾರಿ ಶಾಲೆಯನ್ನ ಸಂಘ ದತ್ತು ಪಡೆಯುತ್ತಿದ್ದು, ಅದರ ಮುಂದುವರೆದ ಭಾಗವಾಗಿ ಕಾರವಾರದಲ್ಲೂ ದತ್ತು ಪಡೆದಿದೆ. ಒಂದೆರಡು ತಿಂಗಳ ಒಳಗೆ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಎಸ್‍ಡಿಎಂಸಿ ಹಾಗೂ ಶಿಕ್ಷಕರ ಜೊತೆ ಸೇರಿ ಮಾಡುತ್ತೇವೆ ಎನ್ನುವುದು ಸಂಘದವರ ಅಭಿಪ್ರಾಯ.
ಕೋಟ್–
ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವ ದೃಷ್ಟಿಯಿಂದ ಸರ್ಕಾರಿ ನೌಕರರು ದತ್ತು ತೆಗೆದುಕೊಂಡ ಶಾಲೆಗೆ ನಾವು ಸಹ ಸಹಾಯ ಹಸ್ತ ಚಾಚುತ್ತೇವೆ. ನಾವು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಕನ್ನಡದ ಬಗ್ಗೆ ಇರುವ ಬದ್ಧತೆಯನ್ನು ತೋರಬೇಕು.–ಸೋಮಶೇಖರ್, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಅಲ್ಲದೆ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನಾವು ನೀಡಬೇಕು. ಈ ದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ಉತ್ತಮ ಗುಣಮಟ್ಟಕ್ಕೆ ಏರಿಸಲು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಸರ್ಕಾರ ಹಾಗೂ ಸಂಘ- ಸಂಸ್ಥೆಗಳ ನೆರವು ಪಡೆದು ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ಸಹ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.–ಸಿ.ಎಸ್.ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ