ಯಲ್ಲಾಪುರ:ಹಾಸಣಗಿ ಸೇವಾ ಸಹಕಾರಿ ಸಂಘ, ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ರಂಗ ಸಮೂಹಗಳ ಸಹಕಾರದೊಂದಿಗೆ ಮೇ 15 ಮತ್ತು 16ರಂದು ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. ಮಂಚಿಕೇರಿಯ ಸಂಹತಿ ಬಳಗದವರಿಂದ ಮಂಚೀಕೇರಿಯ ರಾಜ ರಾಜೇಶ್ವರಿ ರಂಗಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ `ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಈ ನಾಟಕದ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನ ವಿನಾಯಕ ಭಟ್ಟ ಹಾಸಣಗಿ ಇವರದಾಗಿದೆ. ಸ್ಥಳೀಯ ರಂಗಕಲಾವಿದರಾದ ಜಿ.ಆರ್.ಭಟ್ಟ, ಸುಬ್ರಹ್ಮಣ್ಯ ಹೆಗಡೆ, ಎಂ.ಕೆ.ಭಟ್ಟ, ವಾಸುಕಿ ಹೆಗಡೆ, ವೆಂಕಟರಮಣ ಹೆಗಡೆ ಗೋರ್ಸಗದ್ದೆ, ದೀಪ್ತಿ ರಮೇಶ, ರಾಜಶೇಖರ ಹೆಗಡೆ, ವೆಂಕಟರಮಣ ಶಾಸ್ತ್ರಿ, ನಾಗೇಂದ್ರ ಶಾಸ್ತ್ರಿ, ಪ್ರಕಾಶ ಭಟ್ಟ, ಪ್ರಸಾದ ಭಟ್ಟ, ನಾಗೇಂದ್ರ ಹೆಗಡೆ, ನಾರಾಯಣ ಭಟ್ಟ ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ತಾಂತ್ರಿಕ ವರ್ಗದಲ್ಲಿ ವೆಂಕಟರಮಣ ಹೆಗಡೆ, ರಂಗ ಸಜ್ಜಿಕೆಯಲ್ಲಿ ಜಿ.ಆರ್.ಭಟ್ಟ , ಪ್ರಕಾಶ ಭಟ್ಟ,ರಂಗ ಪರಿಕರದಲ್ಲಿ ನಾರಾಯಣ ಭಟ್ಟ , ನಾಗೇಂದ್ರ ಹೆಗಡೆ, ವಸ್ತ್ರಾಲಂಕಾರದಲ್ಲಿ ವೆಂಕಟರಮಣ ಶಾಸ್ತ್ರಿ , ಪ್ರಕಾಶ ಭಟ್ಟ,ಸಂಗೀತ ಮತ್ತು ನಿರ್ವಹಣೆಯಲ್ಲಿ ಪ್ರಸಾದ ಭಟ್ಟ , ರಾಜಶೇಖರ ಹೆಗಡೆ, ದೀಪ್ತಿ ರಮೇಶ (ಪ್ರಸಾಧನ), ಎಂ.ಕೆ.ಭಟ್ಟ, ವಾಸುಕಿ (ಬೆಳಕು), ಜನಾರ್ಧನ ಹೆಗಡೆ, ಎಸ್.ಎನ್.ಭಟ್ಟ, ನಾಗರಾಜ ಹೆಗಡೆ (ಪ್ರಚಾರ ನಿರ್ವಹಣೆ), ನಾಗೇಂದ್ರ ಶಾಸ್ತ್ರಿ, ವಾಸುಕಿ ಹೆಗಡೆ (ರಂಗ ನಿರ್ವಹಣೆ), ಜಿ.ಎನ್.ಶಾಸ್ತ್ರಿ (ಸಂಚಾಲಕರು) ಪಾಲ್ಗೊಳ್ಳುವರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಓದುಗರಿಗೆ ಪೂಚಂತೇ ಎಂದೇ ಪರಿಚಿತರು. ತಮ್ಮ ಕಥೆ, ಬರಹ,ಛಾಯಾಗ್ರಹಣಗಳ ಮೂಲಕ ಕನ್ನಡದ ಸಂವೇದನೆಗಳಿಗೆ ನೂತನ ಹೊಳಹು ನೀಡಿದವರು. ಅವರ ಕಥೆಗಳ ಘಟನಾವಳಿಯಲ್ಲಿ ಸಾಕಷ್ಟು ನಾಟಕೀಯ ಅಂಶಗಳನ್ನು ಕಾಣಬಹುದಾಗಿದ್ದು, ಎಲ್ಲ ಕಥೆಗಳಲ್ಲಿ ವರ್ತಮಾನ, ಭೂತ, ಭವಿಷ್ಯಗಳ ನಡುವೆ ಸರಿದಾಡುವ ಆಯ್ಕೆ ಕಂಡು ಬರುತ್ತದೆ ಆದ್ದರಿಂದಲೇ ಅವರ ಕಥೆಗಳ ರಂಗ ಪ್ರದರ್ಶನಗಳು ಯಶಸ್ವಿಯಾಗುತ್ತವೆ. ಇಲ್ಲಿ ಪ್ರದರ್ಶನಗೊಳ್ಳಲಿರುವ `ಕೃಷ್ಣೇಗೌಡನ ಆನೆ’ ಪ್ರೇಕ್ಷಕರ ಕಲ್ಪನೆ, ಭಾವನೆ ಹಾಗೂ ಅನುಭವಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ.
ಇಂತಹ ರಂಗ ಪ್ರದರ್ಶನಕ್ಕೆ ಅಣಿಯಾಗಿರುವ `ಸಂಹತಿ’ ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಅಭಿವ್ಯಕ್ತಿಗಳನ್ನು ಕಾರ್ಯರೂಪಕ್ಕಿಳಿಸುವ ಸದಭಿರುಚಿಯ, ಸಮಾನ ಮನಸ್ಕರ ಸಂಘಟನೆಯಾಗಿದೆ. ಈವರೆಗೆ 8ಕ್ಕಿಂತ ಹೆಚ್ಚು ನಾಟಕಗಳನ್ನು ಪ್ರಯೋಗಿಸಿದ್ದು ನಾಡಿನ ಪ್ರಸಿದ್ದ ಕಲಾ ತಂಡಗಳಿಂದ ನಾಟಕ, ಸಂಗೀತ, ನೃತ್ಯ, ಇಂದ್ರಜಾಲ, ಸಿನೆಮಾ ರಸಗ್ರಹಣ ಶಿಬಿರ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಸೃಷ್ಟಿಶೀಲ ಚಟುವಟಿಕೆಗಳ ಮೂಲಕ ಸಮುದಾಯದೊಂದಿಗೆ ನಿರಂತರ ಸಂವಾದ, ಸಂಬಂಧ ಏರ್ಪಡಿಸಿಕೊಳ್ಳಬೇಕೆಂಬುದು ಸಂಹತಿಯ ಉದ್ದೇಶವಾಗಿದೆ ಎಂದು ವಿನಾಯಕ ಭಟ್ಟ ಹಾಸಣಗಿ ತಿಳಿಸಿದ್ದಾರೆ.