ಅಂಕೋಲಾ: ಕರ್ನಾಟಕ ರಾಜ್ಯ ನೋಟರಿಗಳ ಸಂಘ ಮತ್ತು ಉತ್ತರಕನ್ನಡ ಜಿಲ್ಲಾ ನೋಟರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನೋಟರಿಗಳ ಸಂಘದ ಉದ್ಘಾಟನೆ ಮತ್ತು ನೋಟರಿಗಳ ಸಮಾವೇಶ ಮೇ 21ರಂದು ಪಟ್ಟಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ನಾಗಾನಂದ ಐ.ಬಂಟ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 21ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೋಟರಿಗಳ ಜಿಲ್ಲಾ ಸಂಘವನ್ನು ಮತ್ತು ನೋಟರಿಗಳ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಎನ್.ಕೋಟೇಶ್ವರರಾವ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಅಖಿಲ ಭಾರತ ನೋಟರಿಗಳ ಸಂಘದ ಕಾರ್ಯದರ್ಶಿ ನವದೆಹಲಿಯ ಆಸಿಫ್ ಅಲಿ, ರಾಜ್ಯ ನೋಟರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಜೀರಿಗೆ, ಸಹಕಾರ್ಯದರ್ಶಿ ಸಿ.ಎಸ್.ಚಿಕ್ಕನಗೌಡರ್ ಉಪಸ್ಥಿತರಿರಲಿದ್ದಾರೆ. ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ನೋಟರಿಗಳನ್ನು ಸನ್ಮಾನಿಸಿ ಗೌರವಿಸಲಾಗುವದು ಎಂದರು.
ದ್ವಿತೀಯ ಕಲಾಪವು ಮಧ್ಯಾಹ್ನ 12.30ರಿಂದ ನಡೆಯಲಿದ್ದು, ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಎನ್.ಕೋಟೇಶ್ವರರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಗಾವಿಯ ಹಿರಿಯ ವಕೀಲ ವಿಜಯ ಮಹೇಂದ್ರಕರ ಸಾರ್ವಜನಿಕ ಜೀವನದಲ್ಲಿ ನೋಟರಿಗಳ ಪಾತ್ರ ಮತ್ತು ನೋಟರಿ ವೃತ್ತಿಯಲ್ಲಿ ಎದುರಿಸುವ ಸವಾಲುಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದು, ಅಂಕೋಲಾದ ಹಿರಿಯ ವಕೀಲರು, ನೋಟರಿಗಳಾದ ಸುಭಾಷ ನಾರ್ವೇಕರ ನೋಟರಿ ಅಪರಾಧಗಳ ತಡೆ ಮತ್ತು ನೋಟರಿ ಡಿಜಿಟಲೀಕರಣ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ ಎಂದರು.
ನೋಟರಿ ಸುಭಾಷ ನಾರ್ವೇಕರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ನೋಟರಿಗಳ ಸಂಘದ ಉಪಾಧ್ಯಕ್ಷ ನಿತ್ಯಾನಂದ ಕವರಿ, ಪ್ರಧಾನ ಕಾರ್ಯದರ್ಶಿ ಭೈರವ ಡಿ.ನಾಯ್ಕ, ವಕೀಲ ಉಮೇಶ ನಾಯ್ಕ, ವಿನೋದ ಶಾನಭಾಗ ಇದ್ದರು.