
ಮುಂಡಗೋಡ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಹೊರವಲಯದ ಬಂಕಾಪುರ ರಸ್ತೆಯಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ರಸ್ತೆಗೆ ಉರುಳಿರುವ ಹಿನ್ನೆಲೆಯಲ್ಲಿ ಬಂಕಾಪುರ ರಸ್ತೆಯ ಸಂಚಾರ ಒಂದು ಘಂಟೆಗಿಂತ ಹೆಚ್ಚು ಕಾಲ ಬಂದಾಗಿತ್ತು.
ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಇಲಾಖೆಯವರು ರಸ್ತೆಗೆ ಬಿದ್ದ ಮರವನ್ನು ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಸನವಳ್ಳಿ ಗ್ರಾಮಕ್ಕೆ ವಿದ್ಯುತ್ ನೀಡುವ ವಿದ್ಯುತ್ ತಂತಿ ಹರಿದು ಕಂಬಗಳು ಮುರಿದು ಧರೆಗೆ ಉರುಳಿವೆ. ಈ ಅವಘಡದಿಂದ ವಾಹನ ಸವಾರರಿಗೆ ಅಥವಾ ಪಾದಚಾರಿಗಳಿಗೆ ಯಾವುದೆ ರೀತಿಯ ಹಾನಿ ಸಂಭವಿಸಿಲ್ಲ.