• Slide
    Slide
    Slide
    previous arrow
    next arrow
  • ಸಿಮರೂಬಾ ಬೆಳೆಸುವತ್ತ ರೈತರು ಚಿತ್ತ ಹರಿಸಲಿ: ಕೆ.ಎಂ.ಹೆಗಡೆ

    300x250 AD

    ಶಿರಸಿ: ಮಲೆನಾಡ ಭಾಗದಲ್ಲಿ ಅಡಿಕೆಯ ಜೊತೆಗೆ ಪರ್ಯಾಯ ಬೆಳೆಯಾಗಿ ಸಿಮರೂಬಾ ಸಸ್ಯವನ್ನು ಬೆಳೆಸಿದರೆ ರೈತರು ಆರ್ಥಿಕವಾಗಿ ಸಬಲರಾಗಬಹುದು ಎಂದು ಪ್ರಗತಿ ಪರ ಕೃಷಿಕ ಕೆ.ಎಂ.ಹೆಗಡೆ ಭೈರುಂಬೆ ಹೇಳಿದರು.

    ಟಿ.ಆರ್.ಸಿ ಶಿರಸಿ ಹಾಗು ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿ., ಶಿರಸಿ ಸಹಯೋಗದಲ್ಲಿ ಜಿ ಜಿ ಹೆಗಡೆ ಹುಲೇಮಳಗಿ ಸ್ಮರಣಾರ್ಥ ‘ಸಿಮರೂಬಾ’ ಬೆಳೆಯ ಮಹತ್ವ ಮತ್ತು ಅವಕಾಶಗಳು ಎಂಬ ವಿಷಯದ ಮೇಲೆ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸೊಪ್ಪಿನ ಬೆಟ್ಟದಿಂದ ರೈತರಿಗೆ ನೇರವಾಗಿ ಆದಾಯ ಕಡಿಮೆ ಎಂಬ ಕಲ್ಪನೆ ಜನರಲ್ಲಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸೊಪ್ಪಿನ ಬೆಟ್ಟದಿಂದಲೂ ಸಹ ನೇರ ಆದಾಯ ರೈತರಿಗೆ ದೊರಕುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಆದಾಯದ ದೃಷ್ಟಿಯಿಂದ ಸೊಪ್ಪಿನ ಬೆಟ್ಟವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮಲ್ಲಿದೆ ಎಂದರು. ಸೊಪ್ಪಿನ ಬೆಟ್ಟದಲ್ಲಿ ಸಿಮರೂಬಾ ಬೆಳೆಯುವ ಸಾಧ್ಯತೆ ನಮ್ಮಲ್ಲಿ ಜಾಸ್ತಿಯಿದೆ. ಔಷಧೀಯ ಗುಣವಿರುವ ಕಾರಣಕ್ಕೆ ಹೆಚ್ಚಿನ ಬೇಡಿಕೆಯಿದೆ. ಕ್ಯಾನ್ಸರ್ ರೋಗದ ನಿವಾರಣೆಯಲ್ಲಿಯೂ ಸಹ ಸಿಮರೂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.

    ಉಪ ಅರಣ್ಯಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಮಾತನಾಡಿ, ಜೀವನ ಮತ್ತು ಕೃಷಿ ಹೊರತಲ್ಲ. ಇವೆರಡರ ನಡುವೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ನೈಸರ್ಗಿಕ ಸಮತೋಲನ ಕಾಪಾಡುವಲ್ಲಿ ನಮ್ಮ ಪ್ರಯತ್ನ ಹೆಚ್ಚಬೇಕು. ಅರಣ್ಯದ ಮೇಲೆ ಅವಲಂಬಿತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅರಣ್ಯದ ಪ್ರಮಾಣ ಕ್ಷೀಣಿಸುತ್ತಿದೆ. ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಕಾರ್ಯವಲ್ಲ. ಎಲ್ಲರೂ ಸಹಕರಿಸಿದರೆ ಮಾತ್ರ ಸಂರಕ್ಷಣೆ ಸಾಧ್ಯ ಎಂದರು.

    ಶಿರಸಿ ಡಿ.ಎಪ್.ಓ ಅಜ್ಜಯ್ಯ ಮಾತನಾಡಿ, ಈ ಮಲೆನಾಡು ಭಾಗದಲ್ಲಿ ಸಿಮರೂಬಾದಂತ ಔಷಧಿ ಸಸ್ಯವನ್ನು ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಜನತೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿ.ಅರ್.ಸಿ ನಿರ್ದೇಶಕ ಜಿ.ವಿ. ಜೋಷಿ ಕಾಗೇರಿ ಮಾತನಾಡಿ, ಬೆಟ್ಟವನ್ನು ಉಳಿಸಿಕೊಳ್ಳುವುದರ ಜೊತೆಗೆ ಬೆಟ್ಟವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಿಮರೂಬಾದ ಬಳಕೆ ನಮ್ಮ ಭಾಗದಲ್ಲಿ ಹೆಚ್ಚುವಂತಾಗಲಿ ಎಂದರು.

    ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಧಾರವಾಡದ ರಾಮಚಂದ್ರ ಪಂಡರಿ ಸಿಮರೂಬಾ ಸಸ್ಯದ ಕುರಿತಾಗಿ ಸಮಗ್ರ ಮಾಹಿತಿ ನೀಡಿ, ಅದರ ಮಹತ್ವ, ಉಪಯೋಗ ಮತ್ತು ಸಿಮರೂಬಾದಿಂದ ರೈತರಿಗಾಗುವ ವಾಣಿಜ್ಯ ಉಪಯೋಗಗಳನ್ನು ಸವಿಸ್ತಾರವಾಗಿ ವಿವರಿಸಿದರು. ಸಿಮರೂಬಾ ಸಸ್ಯದ ಬಳಕೆಯ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ಮತ್ತು ಸರಕಾರ ಆದ್ಯತೆ ನೀಡುವಂತಾಗಬೇಕು ಎಂದರು.

    ವೇದಿಕೆಯಲ್ಲಿ ಟಿ.ಆರ್.ಸಿ ಉಪಾಧ್ಯಕ್ಷ ಲೋಕೇಶ ಹೆಗಡೆ ಹುಲೇಮಳಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸುಗಂಧಿ ಗುರುಪ್ರಸಾದ ಸುಶ್ರಾವ್ಯವಾಗಿ ಪ್ರಾರ್ಥಿಸಿದರು. ಅನಿಲ ಕುಮಾರ ಹೆಗಡೆ ಲಿಂಗದಕೋಣ ಸ್ವಾಗತಿಸಿದರು. ಟಿ.ಆರ್.ಸಿ.ಯ ಜಿ.ಜಿ. ಹೆಗಡೆ ನಿರೂಪಿಸಿದರು. ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಮುಖ್ಯಕಾರ್ಯನಿರ್ವಾಹಕ ಗುರುಪ್ರಸಾದ ಶಾಸ್ತ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ನೂರಕ್ಕೂ ಅಧಿಕ ಆಸಕ್ತ ರೈತರು ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top