ದಾಂಡೇಲಿ: ಎರಡು ಆನೆಗಳ ನಡುವೆ ಪರಸ್ಪರ ಕಾದಾಟ ನಡೆದು, ಕಾದಾಟದಲ್ಲಿ ಗಾಯಗೊಂಡ ಆನೆಯೊಂದು ಮೃತಪಟ್ಟ ಘಟನೆ ತಾಲ್ಲೂಕಿನ ಕುಳಗಿ ವನ್ಯಜೀವಿ ವ್ಯಾಪ್ತಿಯ ಕೇಗದಾಳದಲ್ಲಿರುವ ಬೊಮ್ಮನಹಳ್ಳಿ ಹಳ್ಳದಲ್ಲಿ ನಡೆದಿದೆ.
ಎರಡು ಆನೆಗಳು ಪರಸ್ಪರ ಕಾದಾಟ ನಡೆಸಿದ ಪರಿಣಾಮವಾಗಿ ಒಂದು ಆನೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಗಾಯಗೊಂಡ ಆನೆ ಕೇಗದಾಳದ ಬೊಮ್ಮನಳ್ಳಿ ಹಳ್ಳದಲ್ಲಿ ಬಂದು ಮೃತಪಟ್ಟಿದೆ.
ಆನೆಯೊಂದು ಮೃತಪಟ್ಟ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ವನಜೀವಿ ವಿಭಾಗದ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಕಾಳಿಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮರಿಯಾ ಕ್ರಿಸ್ತುರಾಜ್ ಹಾಗೂ ವನ್ಯಜೀವಿ ವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡ್ಕರ್ ಅವರ ಮಾರ್ಗದರ್ಶನದಲ್ಲಿ ಕುಳಗಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ಅಭಿಷೇಕ ನಾಯ್ಕ ಅವರ ನೇತೃತ್ವದಲ್ಲಿ ಮೃತ ಆನೆಯ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯರಿಂದ ನಡೆಸಿದ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.