
ಸಿದ್ದಾಪುರ: ಕಳೆದ ಎರಡು ದಿನಗಳ ಧಾರಾಕಾರ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರಿನ ಪ್ರವಾಹ ಒಂದೇ ಸಮನೆ ಏರಿಕೆಯಾಗಿದೆ. ಶಿರಸಿ ಸಿದ್ದಾಪುರ ತಾಲೂಕಿನ ಗಡಿ ಪ್ರದೇಶವಾದ ಸರಕುಳಿ ನೀರಿನ ಪ್ರವಾಹಕ್ಕೆ ಸಿಲುಕಿದ್ದಾರೆ.
ಗುರುವಾರ ಸಂಜೆಯವರೆಗೂ ಸೇತುವೆ ಮಟ್ಟಕ್ಕೆ ಹರಿಯುತ್ತಿದ್ದ ನೀರು ರಾತ್ರಿಯ ವೇಳೆ ಅಪಾಯದ ಮಟ್ಟದಲ್ಲಿ ಹರಿದಿದೆ. ಇದರಿಂದಾಗಿ ಇಲ್ಲಿ ಮಹಿಷಾಸುರ ಮರ್ಧಿನಿ ದೇವಾಲಯದ ಒಳಗೆ ನೀರು ನುಗ್ಗಿದೆ.
ಇಲ್ಲಿಯ ಶ್ರೀಧರ ನಾಯ್ಕ ಅವರ ಮನೆಯೊಳಗೆ ಸೊಂಟದಷ್ಟೆತ್ತರಕ್ಕೆ ನೀರು ಹರಿದಿದ್ದು, ಮನೆಯಲ್ಲಿರುವ ಸಾಮಾನು ಸರಂಜಾಮುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಹೊರ ಸಾಗಿಸಲಾಯಿತು. ಇಲ್ಲಿಯ ಗಣಪತಿ ಶೆಟ್ಟಿ ಅವರ ಮನೆ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಡೆಯಾಗಿ ಮನೆಯೊಳಗಿರುವ ವಸ್ತುಗಳೆಲ್ಲ ಕೊಚ್ಚಿಹೋಗಿವೆ.
ಅಘನಾಶಿನಿ ಪ್ರವಾಹದಿಂದಾಗಿ ಇಲ್ಲಿಯ ಅನೇಕ ಮನೆಗಳ ನಿವಾಸಿಗಳು ಅನಿವಾರ್ಯವಾಗಿ ಮನೆ ಬಿಡುವಂತಾಗಿವೆ. ದೇವಾಲಯದೊಳಗೆ ಸಿಲುಕಿದ್ದ ಗಣಪತಿ ಭಟ್ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.