ಭಟ್ಕಳ: 3.87 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಲೂಕಿನ ಬೆಳಕೆಯ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಮೇ 15ರಂದು ಶ್ರೀಕ್ಷೇತ್ರ ಕನ್ಯಾಡಿ ನಿತ್ಯಾನಂದನಗರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸ ಸಹಸ್ರಮಾನದ ಉಡುಗೊರೆಯಾಗಿ ನಮ್ಮ ಸಂಘ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ತನ್ನ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಆಧುನಿಕ ತಂತ್ರಜ್ಞಾನ ಯುಗಕ್ಕೆ ಅನುಗುಣವಾಗಿ ಸೇವೆಯನ್ನು ಸಲ್ಲಿಸುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ನೂತನ ಶೈಲಿಯಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಿದ್ದೇವೆ. 2018ರ ಮಾ.25ರಂದು ಮಾಜಿ ಶಾಸಕ ಮಂಕಾಳ ವೈದ್ಯ ಅವರ ಅವಧಿಯಲ್ಲಿ ಕಟ್ಟಡದ ಶಿಲಾನ್ಯಾಸ ಮಾಡಲಾಗಿತ್ತು ಎಂದು ತಿಳಿಸಿದರು.
ಸತತ 30 ವರ್ಷಕ್ಕೂ ಅಧಿಕ ಕಾಲ ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿನ್ನೆಲೆ ನೂತನ ಕಟ್ಟಡದ ಎರಡನೇ ಮಹಡಿಯಲ್ಲಿನ ಸಭಾಭವನಕ್ಕೆ ಎಮ್.ಎಸ್.ನಾಯ್ಕ ಸಭಾಭವನ ಎಂದು ಹೆಸರಿಡುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾರಾಯಣ ನಾಯ್ಕ, ನಿರ್ದೇಶಕ ಮಂಡಳಿಯ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ಎನ್.ನಾಯ್ಕ ಇದ್ದರು.
ಸಂಘ ಬೆಳೆದು ಬಂದ ಹಾದಿ: 1952ರಲ್ಲಿ ಬೆಳಕೆ ಗ್ರೂಪ್ ಸೇವಾ ಸಹಕಾರಿ ಸಂಘ ಎಂಬ ಶಿರೋನಾಮೆಯೊಂದಿಗೆ ಅಬ್ಬಿಹಿತ್ಲುವಲ್ಲಿ ಸಂಘದ ಮೊದಲ ಕಚೇರಿಯು ಆರಂಭಗೊಂಡಿತು. ನಂತರ ಸೋಡಿಗದ್ದೆಯ ಮಹಾಸತಿ ದೇವಸ್ಥಾನ ಪಕ್ಕದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯಾರಂಭಗೊಂಡಿತು. ಅಂದು ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ದಿ.ಕೃಷ್ಣಪ್ಪ ನಾಯ್ಕ ಅಬ್ಬಿಹಿತ್ಲು ಕಾರ್ಯನಿರ್ವಹಿಸಿದ್ದರು.
ಪ್ರಾರಂಭಿಕ ವರ್ಷದಲ್ಲಿ ಸಂಘದ ತನ್ನ ವ್ಯವಹಾರ ಗತಿಯನ್ನು ನಿಧಾನಗತಿಯಲ್ಲಿ ಇಡಬೇಕಾದ ವೇಳೆಯಲ್ಲಿ 1959ರ ಕೃಷಿ ಪತ್ತಿನ ಸಹಕಾರಿ ಸಂಘಗಳ ರಚನೆ ಕುರಿತು ವಿ.ಎಲ್.ಮೇಹ್ತಾ ಸಮಿತಿಯು ಸಲ್ಲಿಸಿದ ವರದಿಯ ಹಿನ್ನೆಲೆ ಮತ್ತು ಕರ್ನಾಟಕ ಸಹಕಾರಿ ಸಂಘಗಳ 1950ರ ಸಮಗ್ರ ಕಾಯ್ದೆ ಮತ್ತು ನಿಯಮಾವಳಿಗಳು ಜಾರಿಗೆ ಬಂದ ಹಿನ್ನೆಲೆ ಕಚೇರಿಯು ಪುನರ ರಚನೆಗೊಂಡು ಕಾರ್ಯನಿರ್ವಹಿಸುತ್ತಾ ಬಂದಿತು. ಭಾರತೀಯ ರಿಜರ್ವ ಬ್ಯಾಂಕ್ ಕೃಷಿ ಪತ್ತಿನ ಪುನರ್ಘಟನೆಯ ಯೋಜನೆ ಅನ್ವಯ 1976-77ರಲ್ಲಿ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ಹೆಸರಿನೊಂದಿಗೆ ಪುನರ್ ಕಾರ್ಯಾರಂಭಗೊಂಡಿತ್ತು.
10 ಹಳ್ಳಿಗಳ ಕಾರ್ಯವ್ಯಾಪ್ತಿಯಲ್ಲಿ ಬರುವ ನಮ್ಮ ಸಂಘವು ಹಿರಿಯ ಮುತ್ಸದ್ಧಿಗಳು, ರಾಜಕೀಯ ಧುರೀಣರು ಹಾಗೂ ಸಂಘದ ಅಧ್ಯಕ್ಷರಾಗಿದ್ದ ಎಮ್.ಎಸ್.ನಾಯ್ಕ ಅವರು 1974ರಲ್ಲಿ ಆಯ್ಕೆಗೊಂಡಿದ್ದರು. ಈಗಿರುವ ಹಾಲಿ ಸಂಘದ ಕಟ್ಟಡದ ಅಡಿಗಲ್ಲನ್ನು ಅಂದಿನ ಮಾಜಿ ಸಚಿವ ಎಸ್.ಎಮ್.ಯಾಯಾ ಹಾಕಿದ್ದು, ಆ ಮೂಲಕ ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
70 ವರ್ಷಗಳ ಸಂಘದ ಕಾರ್ಯಾವಧಿಯಲ್ಲಿ ಕಳೆದ 45 ವರ್ಷಗಳ ಅವಧಿಯು ಸಂಘಕ್ಕೆ ಒಂದು ಏಳು-ಬೀಳಿನ ಕಾಲವಾಗಿದ್ದರು ಅದಕ್ಕೆ ಎದೆಗುಂದದೆ ಕಾಲಕಾಲಕ್ಕೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾ ಅಭಿವೃದ್ಧಿಯ ಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೇವೆ. ಹಾಲಿ ಸಂಘದ ಅಧ್ಯಕ್ಷ, ಸಹಕಾರಿ ಧುರೀಣರಾದ ಮಂಜುನಾಥ ಲಚ್ಮಯ್ಯ ನಾಯ್ಕ 14 ವರ್ಷದಿಂದ ಆಡಳಿತ ಮಂಡಳಿಯಲ್ಲಿದ್ದು ಸತತ 11 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸಂಘದ ನಿರ್ದೇಶಕರ ಮಂಡಳಿಯ ಸಲಹೆ ಬೆಂಬಲದೊಂದಿಗೆ ಉತ್ತಮ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಸಂಘ ವಿವಿಧ ರೀತಿಯ ಆರ್ಥಿಕ ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಿ ಗಣನೀಯ ಪ್ರಮಾಣದಲ್ಲಿ ವ್ಯವಹಾರ ಹೆಚ್ಚಿಸಿಕೊಂಡಿದೆ.
100 ಮಂದಿ ಪ್ರಾರಂಭದ ಸದಸ್ಯರ ಸಂಖ್ಯೆಯಿಂದ ಇಂದು 7289 ಮಂದಿ ಸದಸ್ಯರಾಗಿದ್ದಾರೆ. ಆರಂಭದ ರೂ. 200 ತಲಾ 2 ರೂ. ರಂತೆ ಬಂಡವಾಳದೊಂದಿಗೆ ಈಗ 3.79 ಕೋಟಿ ರೂ. ಶೇರು ಬಂಡವಾಳ ಹೊಂದಿದೆ. ಸದ್ಯ 52,55.92 ಕೋಟಿ ಒಟ್ಟು ಠೇವಣಿಗಳಿವೆ. ನಿವ್ವಳ ಲಾಭ 105.60 ಕೋಟಿ, 2 ಶಾಖೆ ಹಾಗೂ ಪ್ರಧಾನ ಕಚೇರಿಯಲ್ಲಿ 20 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟು 5 ಬಾರಿ ಕೆ.ಡಿ.ಸಿ.ಸಿ. ಬ್ಯಾಂಕ್ ಶಿರಸಿಯಿಂದ ತಾಲೂಕಿನ ಉತ್ತಮ ಸಹಕಾರಿ ಸಂಘ, 6 ಬಾರಿ ರಾಜ್ಯ ಅಪೇಕ್ಸ ಬ್ಯಾಂಕನಿಂದ ಜಿಲ್ಲಾ ಮಟ್ಟದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಭಾಜರಾಗಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ: ಮೇ 15ರಂದು ನಡೆಯುವ ಕಾರ್ಯಕ್ರಮದಲ್ಲಿ ಸಂಘದ ಭದ್ರತಾ ಕೋಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಮಿಕ ಸಚಿವ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಆಡಳಿತ ಮಂಡಳಿಯ ಕಚೇರಿಯನ್ನು, ಶಾಸಕ ಸುನೀಲ ನಾಯ್ಕ ಎಮ್.ಎಸ್.ನಾಯ್ಕ ಸಭಾಭವನವನ್ನು, ಕೆ.ಡಿ.ಸಿ.ಸಿ. ಬ್ಯಾಂಕ್ ಮಾಜಿ ನಿರ್ದೇಶಕ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ ಗೋದಾಮನ್ನು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಇಫ್ಕೋ ನವದೆಹಲಿ ನಿರ್ದೇಶಕ, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಡಾ.ಎಂ.ಎನ್.ರಾಜೇಂದ್ರಕುಮಾರ ಅವರು ಆಡಳಿತ ಮಂಡಳಿಯ ಸಭಾಭವನವನ್ನು ಉದ್ಘಾಟನೆ ಮಾಡಲಿದ್ದು, ಸಂಘದ ಕಟ್ಟಡದ ಲಿಫ್ಟ್ ಉದ್ಘಾಟನೆಯನ್ನು ಮಾಜಿ ಶಾಸಕ ಜೆ.ಡಿ.ನಾಯ್ಕ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಿ ಜೆ.ಮೊಗೇರ, ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ ಆಗಮಿಸಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮಕ್ಕೂ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಹಾಗೂ ಅತಿಥಿಗಳನ್ನು ಪೂರ್ಣಕುಂಭ ಮೆರವಣಿಗೆಯ ಮೂಲಕ ಸೋಡಿಗದ್ದೆ ಕ್ರಾಸ್‍ನಿಂದ ಸ್ವಾಗತಿಸಲಾಗುತ್ತದೆ. ಬೆಳಿಗ್ಗೆ 10.40ಕ್ಕೆ ನೂತನ ಕಟ್ಟಡದ ಉದ್ಘಾಟನೆ ನಂತರ ಸಭಾ ಕಾರ್ಯಕ್ರಮ, ಮಧ್ಯಾಹ್ನ 1ರಿಂದ 3 ಭೋಜನ ಕೂಟ, ನಂತರ ಸಂಜೆ 6 ಗಂಟೆಗೆ ಝೇಂಕಾರ ಮೇಲೋಡಿಸ್ ಭಟ್ಕಳ ತಂಡದವರಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮ, ರಾತ್ರಿ 9.30ರಿಂದ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.