ಯಲ್ಲಾಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಬುಧವಾರ ತಡರಾತ್ರಿ ಬ್ಯಾಂಕಿನ ಹಿಂಬದಿಯ ಕಿಟಕಿಯನ್ನು ಮುರಿದು ಒಳ ಪ್ರವೇಶಿಸಿ ಕಳ್ಳತನದ ಪ್ರಯತ್ನ ನಡೆದಿದೆ.
ರಾತ್ರಿ ಸಂದರ್ಭದಲ್ಲಿ ವ್ಯಕ್ತಿಯೋರ್ವ ಕಿಟಕಿಯ ಗ್ರೀಲ್ಸ್ ತೆಗೆದು ಒಳಗೆ ಪ್ರವೇಶಿಸಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಬ್ಯಾಂಕಿನ ಒಳಗೆ ಅಲ್ಮೇರಾ ಒಂದನ್ನು ಒಡೆಯಲು ಪ್ರಯತ್ನ ಮಾಡಿದ್ದಾನೆ. ಆದರೂ, ಮೂಲಗಳ ಪ್ರಕಾರ ಬ್ಯಾಂಕಿನಲ್ಲಿಯ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಕೆಲವು ಸಿಸಿ ಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಬ್ಯಾಂಕಿನೊಳಗೆ ಅಕ್ರಮ ಪ್ರವೇಶ ಮಾಡಿದಾಗ ಶಬ್ದ ಮಾಡಬೇಕಿದ್ದ ಅಲಾರಾಂ ಕೂಡ ಕೆಲಸ ಮಾಡಿರಲಿಲ್ಲ ಎನ್ನಲಾಗುತ್ತಿದೆ.
ಗುರುವಾರ ಬೆಳಿಗ್ಗೆ ಬ್ಯಾಂಕು ತೆರೆಯುತ್ತಿದ್ದಂತೆ ಸಿಬ್ಬಂದಿಗೆ ಕಿಟಕಿ ಒಡೆದಿರುವುದು ಕಂಡು ಬಂದಿತು. ಕೂಡಲೇ ಬ್ಯಾಂಕಿನ ವ್ಯವಸ್ಥಾಪಕರು ಪೊಲೀಸರನ್ನು ಕರೆಸಿಕೊಂಡಿದ್ದಾರೆ. ಅಪರಾಧ ವಿಭಾಗದ ಪಿಎಸ್‍ಐ ಅಮಿನ್ ಅತ್ತಾರ್ ಹಾಗೂ ಸಿಬ್ಬಂದಿ ಕೂಡಲೇ ಬ್ಯಾಂಕಿಗೆ ದೌಡಾಯಿಸಿ ಇನ್ನುಳಿದ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಒಳಗೆ ಪ್ರವೇಶಿಸಿ ಬ್ಯಾಂಕಿನ ಒಳಗೆ ಸುತ್ತುತ್ತಿರುವುದು ಕಂಡು ಬಂದಿದೆ.
ಶಿರಸಿ ಡಿಎಸ್‍ಪಿ ರವಿ ನಾಯ್ಕ ಭೇಟಿ ನೀಡಿ ಪರಿಶೀಲಿಸಿ ಪೊಲೀಸರಿಗೆ ಮಾರ್ಗದರ್ಶನ ಮಾಡಿದ್ದಾರೆ. ವಿಧ್ವಂಸಕ ವಿರೋಧಿ ತಪಾಸಣಾ ತಂಡ, ಬೆರಚ್ಚು ತಜ್ಞರು ಬ್ಯಾಂಕಿಗೆ ಭೇಟಿ ನೀಡಿ ಅಗತ್ಯ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಮುಂಡಗೋಡ ಸಿಪಿಐ ಹಾಗೂ ಯಲ್ಲಾಪುರದ ಪ್ರಭಾರ ಪಿಐ ಎಸ್.ಎಸ್.ಸೀಮಾನಿ ಬ್ಯಾಂಕಿಗೆ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಯಲ್ಲಾಪುರದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಸಂಭ್ರಮ ಹೋಟೆಲ್ ಪಕ್ಕದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಅಕ್ಕಪಕ್ಕದಲ್ಲಿ ರಾತ್ರಿ ಹಗಲೂ ಎನ್ನದೇ ಯಾವತ್ತೂ ಜನಸಂಚಾರ ಇರುತ್ತದೆ. ಈ ನಡುವೆ ಕಟಕಿ ಒಡೆದು ಒಳ ಪ್ರವೇಶ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.