ಸಿದ್ದಾಪುರ: ತಾಲೂಕಿನ ಸರಕುಳಿ ಶಿಕ್ಷಣ ಸಮಿತಿ ನಡೆಸುತ್ತಿರುವ ಜಗದಂಬಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಮೇ.14ರಂದು ಮಧ್ಯಾಹ್ನ 4ಕ್ಕೆ ಪ್ರೌಢಶಾಲಾ ರಂಗಮಂದಿರದಲ್ಲಿ ನಡೆಯಲಿದೆ.
1971ರಲ್ಲಿ ಅಂದಿನ ಮುಖ್ಯಾಧ್ಯಾಪಕ ಎಂ.ಎಂ.ಹೆಗಡೆ ಅವರ ಹಿರಿತನದಲ್ಲಿ ಸಂಘ ಸ್ಥಾಪನೆಗೊಂಡು ಪ್ರೌಢಶಾಲೆಯೊಂದಿಗೆ ಕಳೆದ 50ವರ್ಷದಿಂದ ನಿಕಟ ಸಂಬಂಧ ಹೊಂದಿದ್ದು ಶಾಲೆಯಲ್ಲಿ ನಡೆಯುವ ಎಲ್ಲ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ,ಕೃಷಿ,ಆರೋಗ್ಯ ಸಾಮಾಜಿಕ ಜಾಗೃತಿ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ತನ್ನದೇ ಆದ ಕೊಡುಗೆ ನೀಡುತ್ತ ಜನಪರ ಸಂಘವಾಗಿ ಸಮಾಜದಲ್ಲಿ ಗುರುತಿಸಿಕೊಂಡಿದೆ.
ಸಂಸ್ಥೆಯು 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಸದಸ್ಯರ ಸಮ್ಮಿಲನದೊಂದಿಗೆ ಸುವರ್ಣ ಮಹೋತ್ಸವ ಆಚರಿಸಲು ಸಿದ್ದತೆ ನಡೆಸಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ.ಹೆಗಡೆ ತ್ಯಾರಗಲ್, ಗೌರವಾಧ್ಯಕ್ಷ ಹಾಗೂ ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಎಚ್.ಎಸ್, ಸದಸ್ಯ ಆರ್.ಎಸ್.ಹೆಗಡೆ ಹುಲಿಮನೆ ಅವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯಾಧ್ಯಾಪಕ ಎಂ.ಎಂ.ಹೆಗಡೆ ಉದ್ಘಾಟಿಸುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕುಳಿ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಜಿ.ಹೆಗಡೆ ತ್ಯಾರಗಲ್ ವಹಿಸಲಿದ್ದು, ನಿವೃತ್ತ ಮುಖ್ಯಾಧ್ಯಾಪಕರಾದ ಬಿ.ಎಂ.ಚಿತ್ರಗಿಮಠ, ಜಿ.ಎಸ್.ಹೆಗಡೆ,ಜಿ.ಆರ್.ಭಾಗವತ್, ಟಿ.ಆರ್.ಜೋಶಿ,ಎಸ್.ಎನ್.ಭಟ್ಟ, ವಿ.ಜಿ.ಭಟ್ಟ, ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಎಚ್.ಎಸ್. ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಂ.ವಿ.ಭಟ್ಟ ತಟ್ಟಿಕೈ, ಜಿ.ಎನ್.ಹೆಗಡೆ ಶಿರಗೋಡು,ಜಿ.ಎಸ್.ಹೆಗಡೆ ತಟ್ಟಿಕೈ,ಸೀತಾರಾಮ ಹೆಗಡೆ ಭೀಮ್ನಳ್ಳಿ,ಗಣೇಶ ಎನ್.ಹೇರೂರು ಉಪಸ್ಥಿತರಿರುತ್ತಾರೆ.
ಸಾಂಸ್ಕೃತಿಕ ವೈವಿಧ್ಯ: ಕಾರ್ಯಕ್ರಮದಲ್ಲಿ ರಾಘವೇಂದ್ರ ಹೆಗಡೆ ಕಡ್ನಮನೆ ಇವರಿಂದ ಮರಳುಕಲಾ ಪ್ರದರ್ಶನ, ಗಣೇಶ ದೇಸಾಯಿ ಮತ್ತು ವೃಂದದವರಿಂದ ಸಂಗೀತ, ರೇಖಾ ಹೆಗಡೆ ಹುಬ್ಬಳ್ಳಿ ಇವರಿಂದ ದಾಸವಾಣಿ, ಡಾ. ಸಂಧ್ಯಾ ಭಟ್ಟ ಹೆಗ್ಗರ್ಸಿಮನೆ ಇವರಿಂದ ಸುಗಮ ಸಂಗೀತ,ಹಳೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.