ಸೊರಬ:ತಾಲ್ಲೂಕಿನ ಕೆರೆಹಳ್ಳಿ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ನೂತನ ಶಿವಸನ್ನಿಧಿ ಕಲ್ಯಾಣ ಮಂಟಪಕ್ಕೆ ಸೋಂದಾ ಸ್ವರ್ಣವಲ್ಲೀ ಮಠದ ಜಗದ್ಗುರು ಶಂಕರಚಾರ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಮಂಟಪದ ನಿರ್ಮಾತೃ ಡಾ: ವಿಶ್ವನಾಥ ನಾಡಿಗೇರ ದಂಪತಿಗಳು ಬಂಧು ಮಿತ್ರರೊಂದಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ರಾಮೇಶ್ವರ ಸ್ವಾಮಿಯ ದರ್ಶನ ಪಡೆದ ಶ್ರೀಗಳು ಗುರುಪಾದುಕಾ ಪೂಜೆಯ ನಂತರ, ಉಪದೇಶಾಮೃತ ನೀಡಿ, ಫಲ ಮಂತ್ರಾಕ್ಷತೆ ನೀಡಿ ಭಕ್ತರನ್ನು ಅನುಗ್ರಹಿಸಿದರು. ತಮ್ಮ ಅನುಗ್ರಹ ಉಪದೇಶದಲ್ಲಿ ಶ್ರೀಗಳು, ಆಹಾರ ನಿದ್ರಾ ,ಭಯ ಮೈಥುನಗಳು, ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಾಮ್ಯತೆ ಇದ್ದು ಕೇವಲ ಧರ್ಮ ಆಚರಣೆಯು ಮನುಷ್ಯ ಮತ್ತು ಇತರ ಪ್ರಾಣಿಗಳಲ್ಲಿ ಭಿನ್ನತೆ ಇದ್ದು, ಮಾನವ ಜನ್ಮ ಪಡೆದ ನಾವು ಧರ್ಮಾಚರಣೆ ಮಾಡಬೇಕೆಂದರು. ಅಲ್ಲದೇ ಪ್ರತಿನಿತ್ಯ ಮನೆಯಲ್ಲಿ ಭಗವದ್ಗೀತೆ ಪಠಣವಾಗಬೇಕೆಂದು ಉಪದೇಶಿಸಿದರು,
ಸೊರಬ ತಾಲೂಕಿನ ಈ ಭಾಗವು ಬನವಾಸಿ ಪ್ರಾಂತ್ಯದ ಭೂ ಭಾಗವಾಗಿದ್ದು, ತನ್ನ ಸಂಪದ್ಭರಿತ ಪ್ರಕೃತಿ ಸೌಂದರ್ಯದಿಂದ, ಆದಿಕಾಲದಿಂದಲೂ ಕವಿಗಳಿಂದ ವರ್ಣಿಸಲ್ಪಟ್ಟಿರುವ ಈ ಭಾಗದಲ್ಲೇ, ಅರಣ್ಯ ನಾಶವಾಗುತ್ತಿರುವದರ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಈ ಭೂಮಿಯನ್ನು ಹಾಳು ಮಾಡದೇ ಮುಂದಿನ ಜನಾಂಗಕ್ಕೆ ಬಿಟ್ಟು ಕೊಡಬೇಕೆಂಬ ಜವಾಬ್ದಾರಿಯನ್ನು ಎಚ್ಚರಿಸಿದರು.
ಕೆರೆಹಳ್ಳಿ ರಾಮೇಶ್ವರ ದೇವಸ್ಥಾದ ಪಕ್ಕದಲ್ಲೇ ನಿರ್ಮಾಣವಾದ ಕಲ್ಯಾಣ ಮಂಟಪದಲ್ಲಿ ಉಪನಯನ ,ವಿವಾಹ, ಇತ್ಯಾದಿ ಸಮಾರಂಭಗಳ ಜೊತೆಗೆ, ಸತ್ಸಂಗ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮಗಳು ಈ ವೇದಿಕೆ ಇಂದ ನಡೆಯಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಕೆರೆಹಳ್ಳಿ, ಬಸೂರು, ಮತ್ತು ಜಡೆಯ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು