ಭಟ್ಕಳ:ತಾಲೂಕಿನ ಸುತ್ತಮುತ್ತ ಗೋವುಗಳನ್ನು ಕದ್ದು ಸಾಗಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಶಂಕೆಯ ಮೇರೆಗೆ 2021ರ ಡಿಸೆಂಬರ್‌ನಲ್ಲಿ ಜಾಲಿರೋಡ್ ನಿವಾಸಿ, ಬದ್ರಿಯಾ ಕಾಲೋನಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಸದ್ದಾಂ ಹುಸೇನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಆರೋಪಿಗಳ ಪೈಕಿ ತಲೆ ಮರೆಸಿಕೊಂಡಿದ್ದ ನಾವುಂದದ ನಿವಾಸಿ ಇಶಾಕ್ ಅಬ್ದುಲ್ ಖಾದಿರ್‌ನನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಭಟ್ಕಳ ಘಟನೆಯ ನಂತರ ಬೆಂಗಳೂರಿಗೆ ಪರಾರಿಯಾಗಿದ್ದು, ಕಳೆದ ಒಂದು ತಿಂಗಳ ಹಿಂದೆಯಷ್ಟೇ ದರೋಡೆಗೆ ಯತ್ನಿಸಿ ಬೆಂಗಳೂರು ಸಂಪಿಗೆಹಳ್ಳಿ ಪೊಲೀಸರು ಈತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. ನಂತರ ಆಸತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲು ಪಾಲಾಗಿದ್ದ ಈತನನ್ನ ಭಟ್ಕಳ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು,ಇಲ್ಲಿನ ಬಿಳಲಂಡ ಮನೆ ಒಂದರಲ್ಲಿ ಬಚ್ಚಿಟ್ಟ ತಲವಾರ ಮತ್ತು ಇತರ ಮಾರಕಾಸ್ತ್ರಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈತನ ಬಂಧನದೊದಿಗೆ ಹಲ್ಲೆ ಘಟನೆಯಲ್ಲಿ ಬಂಧಿತರಾದವರ ಸಂಖ್ಯೆ ಮೂರಕ್ಕೆ ಏರಿದೆ. ಘಟನೆಯಲ್ಲಿ ಪಾಲ್ಗೊಂಡ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.