ಗೋಕರ್ಣ: ಪ್ರವಾಸಿಗರಿಗೆ ಅನುಕೂಲಕ್ಕಾಗಿ ಗೋಕರ್ಣ ಕಡಲತೀರದಲ್ಲಿ ನಿರ್ಮಿಸಲಾದ ಶೌಚಾಲಯವು ಉದ್ಘಾಟನೆಯ ಮೊದಲೇ ಸಮುದ್ರ ಅಲೆಗೆ ಕೊಚ್ಚಿ ಹೋಗಿದೆ. ಅಂತೆಯೇ ಕುಡ್ಲೆ ಕಡಲತೀರದಲ್ಲಿ ಶೌಚಾಲಯವಿದ್ದು, ನಿರ್ವಹಣೆಯಿಲ್ಲದೆ ಹಾಳು ಬಿದ್ದಿದೆ.
ಮೂರು ಲಕ್ಷ ರು.ವೆಚ್ಚದಲ್ಲಿ ನಿರ್ಮಾಣವಾದ ಈ ಶೌಚಗೃಹ ಮಣ್ಣುಪಾಲಾಗಿದೆ. ಇಲ್ಲಿನ ಕುಡ್ಲೆ ಮತ್ತು ಓಂ ಕಡಲತೀರದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ತೆರಳುವ ಈ ಸ್ಥಳದಲ್ಲಿನ ತೊಂದರೆ ಬಗ್ಗೆ ಗಮನಕ್ಕೆ ತಂದ ನಂತರ ಕಳೆದ ಒಂದು ವರ್ಷದ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಕುಡ್ಲೆ ಮತ್ತು ಓಂ ಕಡಲತೀರಕ್ಕೆ ಎರಡು ಫೈಬರ್ನಿಂದ ಶೌಚಾಲಯವನ್ನು ನಿರ್ಮಿಸಿ ಕೊಡಲಾಗಿತ್ತು. ಓಂ ಕಡಲತೀರದಲ್ಲಿ ನಿರ್ಮಿಸಿದ ಶೌಚಾಲಯ ಬಳಕೆಗೆ ಬರುವ ಮುನ್ನವೇ ತೌಕ್ಟೇ ಚಂಡಮಾರುತ ಅಬ್ಬರಕ್ಕೆ ಕೊಚ್ಚಿಹೋಗಿ ನಾಶವಾಗಿದ್ದು, ಇದನ್ನು ಇದುವರೆಗೂ ದುರಸ್ತಿ ಮಾಡದೆ ಹಾಗೇ ಬಿಡಲಾಗಿದೆ .
ಕುಡ್ಲೆ ಕಡಲತೀರದಲ್ಲಿರುವ ಶೌಚ ಗೃಹಕ್ಕೆ ನೀರು ಪೂರೈಕೆಯಾಗದೆ ಹಲವು ದಿನ ಬಳಕೆಗೆ ದೊರೆಯುತ್ತಿರಲಿಲ್ಲ. ಕೊನೆಗೆ ನೀರು ಪೂರೈಕೆ ಮಾಡಿ ಬಳಕೆಗೆ ನೀಡಲಾಗಿತ್ತು, ಆದರೆ ಪ್ರಸ್ತುತ ಸಂಪೂರ್ಣ ಹಾಳು ಬಿದ್ದು, ಹೊಲಸು ತುಂಬಿ ತುಳುಕುತ್ತಿದೆ.
ಈ ಶೌಚಗೃಹವನ್ನು ಗ್ರಾಮ ಪಂಚಾಯತ ನಿರ್ವಹಣೆ ಮಾಡಬೇಕಾಗಿದ್ದು, ಈ ಬಗ್ಗೆ ಪಂಚಾಯತ್ನಲ್ಲಿ ವಿಚಾರಿಸಿದಾಗ ಓಂ ಕಡಲತೀರದಲ್ಲಿನ ಶೌಚಗೃಹದ ದುರಸ್ಥಿಗೆ ಸೂಚಿಸಲಾಗಿದೆ. ಎರಡುಕಡೆ ಆಯಾ ಕಡಲತೀರಗಳ ರೆಸಾರ್ಟ್, ಹೊಟೇಲ್ ಅಸೋಸಿಯೇಶನ್ಸ್ನವರಿಗೆ ನಿರ್ವಹಣೆಗೆ ವಹಿಸಿಕೊಡಲಾಗಿದೆ ಎನ್ನುತ್ತಾರೆ.ಇದೆಲ್ಲದರ ಮಧ್ಯೆ ಪ್ರವಾಸಿಗರಿಗೆ ಬಹಳ ತೊಂದರೆಯುಂಟಾಗುತ್ತಿದ್ದು ಬಯಲು ಶೌಚವೇ ಗತಿಯಾಗಿದೆ.