ಯಲ್ಲಾಪುರ: ನಮ್ಮ ಸದಾಚಾರಗಳ ಒಟ್ಟು ಮೊತ್ತ ಸಂಸ್ಕಾರ. ಆ ಸದಾಚಾರಗಳೇ ದೀರ್ಘ ಇತಿಹಾಸದೊಂದಿಗೆ ಬಂದರೆ ಅದು ಸಂಸ್ಕೃತಿ. ಅದನ್ನು ಅನುಸರಿಸಿಕೊಂಡು ಹೋದರೆ ಜೀವನ ಉತ್ತಮವಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಇಡಗುಂದಿ ಸ್ನೇಹಸಾಗರ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕುಮಾರಿಕಾ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯಮ, ನಿಯಮಗಳು ನಮ್ಮ ಧರ್ಮದ ತಿರುಳು. ಅದನ್ನು ನಿರಂತರವಾಗಿ ಅನುಸರಿಸಿದರೆ ಯೋಗದ ಮುಂದಿನ ಹಂತಕ್ಕೆ ಕೊಂಡೊಯ್ದು ಸಾಧನೆಗೆ ಕರೆದೊಯ್ಯುತ್ತದೆ ಎಂದರು.
ಮಕ್ಕಳು ಮೊಬೈಲನ್ನು ಅಗತ್ಯಕ್ಕಿಂತ ಹೆಚ್ಚಾಗಿ ದುರ್ವ್ಯಸನವಾಗುವಂತೆ ಬಳಕೆ ಮಾಡುವುದು ಸರಿಯಲ್ಲ. ಪಾಲಕರು ಈ ಬಗೆಗೆ ಧೃಢವಾದ ಮಾರ್ಗದರ್ಶನ ಮಾಡಬೇಕು. ಸಮಾಜದಲ್ಲಿ ದುಷ್ಕೃತ್ಯಗಳಿಗೆ ಮೊಬೈಲ್ ಪ್ರೇರಣೆ, ಕಾರಣವಾಗುತ್ತಿರುವುದು ವಿಷಾದನೀಯ ಎಂದರು.
ಕುಮಾರಿಕಾ ಶಿಬಿರದಲ್ಲಿ ಸಂಸ್ಕಾರ, ಸಂಸ್ಕೃತಿಯ ಜ್ಞಾನ ಪಡೆದವರು ದಾರಿ ತಪ್ಪಿಲ್ಲ. ಮಕ್ಕಳು ಸನ್ಮಾರ್ಗದಲ್ಲಿ ಸಾಗಲು ಇಂತಹ ಶಿಬಿರಗಳು ನಿರಂತರವಾಗಿ ನಡೆಯಬೇಕು ಎಂದರು.
ಸಂಸ್ಥೆಯ ಮುಖ್ಯಸ್ಥ ಎಸ್.ಎಲ್.ಭಟ್ಟ, ಶಿಬಿರದ ಸಂಯೋಜಕರಾದ ಅಕ್ಷಯ ಭಟ್ಟ, ಕೆ.ಜಿ.ಬೋಡೆ, ನಾಗೇಶ ಹೆಗಡೆ ಪಣತಗೇರಿ ಇತರರಿದ್ದರು.