
ಶಿರಸಿ: ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಸುರಿಯುತ್ತಿದ್ದು ತಾಲೂಕಿನ ಗ್ರಾಮೀಣ ಭಾಗದ ವಾನಳ್ಳಿ ಪ್ರದೇಶದಲ್ಲಿ ಗುರುವಾರ ಒಂದೇ ದಿನ 16 ಇಂಚು (406.4ಮೀಮೀ) ಯಷ್ಟು ಮಳೆ ದಾಖಲಾಗಿದೆ.
ಕಳೆದೆರಡು ವರ್ಷಗಳಿಂದ ಈ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿದ್ದು 2019ರಲ್ಲಿ ಒಂದೇ ದಿನದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆಪಡೆದ ಪ್ರದೇಶವೆಂದು ಗುರುತಿಸಲ್ಪಟ್ಟಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಮಳೆ ಸುರಿದಿದ್ದು ಜನತೆಯಲ್ಲಿ ಆತಂಕ ಮೂಡಿಸಿದೆ. ಅಲ್ಲದೇ ಈ ಪ್ರದೇಶ ಮುಖ್ಯ ಸಂಪರ್ಕಕೊಂಡಿಯಾದ ಪಟ್ಣಹೊಳೆ ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು ಕಳೆದೆರಡು ದಿನಗಳಿಂದ ಸೇತುವೆಯ ಮೇಲೆ 10ಅಡಿಗಿಂತಲೂ ಹೆಚ್ಚಿನ ನೀರು ಹರಿಯುತ್ತಿದೆ. ಇದರಿಂದಾಗಿ ಇಲ್ಲಿನ ವಾನಳ್ಳಿ-ಕಕ್ಕಳ್ಳಿ , ಜಡ್ಡಿಗದ್ದೆ ಪ್ರದೇಶಗಳು ಸಂಪರ್ಕರಹಿತವಾಗಿದೆ.
50 ವರ್ಷಕ್ಕಿಂತಲೂ ಹಳೆಯದಾದ ಈ ಬ್ರಿಡ್ಜ್ ಶಿಥಿಲಗೊಂಡಿದ್ದು ಇದೇ ರೀತಿ ಮಳೆ ಸುರಿದರೆ ಬ್ರೀಡ್ಜ್ ಬೀಳುವ ಸಂಭವವಿದೆ. ಒಂದು ವೇಳೆ ಸೇತುವೆ ಕುಸಿತಕ್ಕೊಳಗಾದರೆ ಈ ಪ್ರದೇಶಕ್ಕೆ ಯಾವುದೇ ಸಂಪರ್ಕವಿಲ್ಲದೇ ನಡುಗಡ್ಡೆಯಂತಾಗಿ ಜನಜೀವನ ಅಸ್ತ್ಯವ್ಯಸ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ಕೆಲವು ವರ್ಷಗಳಿಂದ ಇದೇ ರೀತಿ ತೊಂದರೆಯಾಗುತ್ತಿದ್ದು ಸೇತುವೆಯ ಮಟ್ಟವನ್ನು ಏರಿಸಿ ಹೊಸದಾಗಿ ಸೇತುವೆ ನಿರ್ಮಿಸಬೇಕೆಂಬುಸು ಸ್ಥಳೀಯರ ಆಗ್ರಹವಾಗಿದೆ. ಆದರೆ ಈ ಕುರಿತು ಯಾವುದೇ ಇಲಾಖೆಯಾಗಲೀ ಜನಪ್ರತಿನಿಧಿಗಳಾಗಲೀ ಗಮನ ಹರಿಸುತ್ತಿಲ್ಲ. ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ರಾಘವೇಂದ್ರ ಜಾಜಿಗುಡ್ಡೆ ವಾನಳ್ಳಿ ಹಾಗೂ ಸುತ್ತಮುತ್ತಲಿ ಪ್ರದೇಶದ ಜನರ ಸಂಚಾರಕ್ಕೆ ಮುಖ್ಯ ಸಂಪರ್ಕವಾದ ಪಟ್ಣಹೊಳೆ ಬ್ರಿಡ್ಜ್ ಬೀಳುವ ಹಂತದಲ್ಲಿದೆ. ಒಂದು ವೇಳೆ ಕುಸಿದರೆ ಜನರಿಗೆ ಪಟ್ಟಣಕ್ಕೆ ತೆರಳಲು ಯಾವುದೇ ಸಂಪರ್ಕಕೊಂಡಿ ಇಲ್ಲ. ಅಲ್ಲದೇ ಸದ್ಯದಲ್ಲೇ ಪದವಿ ತರಗತಿಗಳು ಪ್ರಾರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗುತ್ತದೆ. ಕೂಡಲೇ ಸಂಬಂಧಪಟ್ಟವರು ಹೊಸದಾಗಿ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. .