ಅಂಕೋಲಾ: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಸಾಹಿತಿ ವಿಠ್ಠಲ ಗಾಂವಕರರ ಎರಡು ಹೊಸ ಕೃತಿಗಳು ಬಿಡುಗಡೆಗೆ ಸಜ್ಜಾಗಿವೆ.
ಬಾರ್ಡೋಲಿ ಪ್ರತಿಷ್ಠಾನದ ಅಡಿಯಲ್ಲಿ ಅವರ 34ನೇಯ ಕೃತಿ ‘ಮಕ್ಕಳಿಗೆ ಬದುಕು ಕಲಿಸಿ’ (ಚಿಂತನ ಸಾಹಿತ್ಯ), 35ನೇ ಕೃತಿ ‘ಅವ್ವಳ ನುಡಿದಂಡೆ’ (ಗಾದೆ ಪ್ರಮಾಣಿತ ಚೌಪದಿಗಳ ಕೃತಿ) ಲೋಕಾರ್ಪಣೆಗೊಳ್ಳಲಿವೆ.
ಮೇ 14ರ ಸಂಜೆ 4 ಗಂಟೆಗೆ ತಾಲೂಕಿನ ಬೋಳೆಯಲ್ಲಿಯ ಅವರ ನಿವಾಸ, ‘ನಿಸರ್ಗ’ ಮನೆಯಂಗಳದಲ್ಲಿ ಕೃತಿಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ವಹಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ವಾಸರೆ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಬರಹಗಾರ ಮಹಾಂತೇಶ ರೇವಡಿ ಆಶಯ ನುಡಿಗಳನ್ನಾಡಲಿದ್ದು, ವಿಶ್ರಾಂತ ಪ್ರಾಚಾರ್ಯ, ಸಾಹಿತಿ ಮೋಹನ ಹಬ್ಬು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಲೇಖಕ ವಿಠ್ಠಲ ಗಾಂವಕರ ಕೋರಿದ್ದಾರೆ.